ADVERTISEMENT

ಪೂರ್ಣಗೊಂಡ ಬಂಜಾರಾ ಭವನ : ಹಸ್ತಾಂತರ ಎಂದು?

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 4:41 IST
Last Updated 20 ಡಿಸೆಂಬರ್ 2025, 4:41 IST
ಇಂಡಿಯಲ್ಲಿ  ಬಂಜಾರಾ ಭವನವನ ಮುಂದೆ ಬಂಜಾರಾ ಸಮಾಜದ ಮುಖಂಡರು ಪ್ರತಿಭಟಿಸಿದರು  
ಇಂಡಿಯಲ್ಲಿ  ಬಂಜಾರಾ ಭವನವನ ಮುಂದೆ ಬಂಜಾರಾ ಸಮಾಜದ ಮುಖಂಡರು ಪ್ರತಿಭಟಿಸಿದರು     

ಇಂಡಿ: ಇಲ್ಲಿ ಬಂಜಾರಾ ಭವನ ಕಾಮಗಾರಿ ಪೂರ್ಣಗೊಂಡು 3 ವರ್ಷಗಳು ಕಳೆದಿವೆ. ಭವನ ಲೋಕಾರ್ಪಣೆಗೊಳಿಸಿ 2 ವರ್ಷ ಆರು ತಿಂಗಳು ಕಳೆದಿದೆ. ಆದರೆ ಇದುವರೆಗೂ ಅಲ್ಲಿ ಒಂದೇ ಒಂದು ಕಾರ್ಯಕ್ರಮ ನಡೆದಿಲ್ಲ.  ಉದ್ಘಾಟನೆ ಮಾತ್ರ ಆಗಿದ್ದು, ಸಮಾಜಕ್ಕೆ ಆ ಭವನವನ್ನು ಇದುವರೆಗೂ ಹಸ್ತಾಂತರವೇ ಮಾಡಿಲ್ಲ.

ಈ ಕೂಡಲೇ ಸಮಾಜ ಬಾಂಧವರಿಗೆ ಭವನ ಹಸ್ತಾಂತರಿಸಬೇಕೆಂದು ಬಂಜಾರಾ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.ವಿಜಯಪುರ ರಸ್ತೆಯಲ್ಲಿ ನಿರ್ಮಿಸಲಾದ ಬಂಜಾರ ಭವನದ ಮುಂದೆ  ಬುಧವಾರ, ಗುರುವಾರ ಪ್ರತಿಭಟಿಸಿದ ಸಮಾಜ ಬಾಂಧವರು, ಉದ್ಘಾಟನೆಗೊಂಡು 2 ವರ್ಷ 6 ತಿಂಗಳು ಕಳೆದರೂ ಇದುವರೆಗೂ ಸಮಾಜದ ಕಾರ್ಯಕ್ರಮಗಳಿಗೆ ಉಪಯೋಗವಾಗುತ್ತಿಲ್ಲ. ಸ್ಥಳೀಯ ಶಾಸಕರ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಬಂಜಾರಾ ಸಮುದಾಯದ ನಾಯಕರ ಇಚ್ಛಾಶಕ್ತಿ ಕೊರತೆಯೇ ಇದಕ್ಕೆಲ್ಲ ಕಾರಣ ಎಂದು ದೂರಿದರು.

ಸುನೀಲ ರಾಠೋಡ ಮಾತನಾಡಿ, ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಬಂಜಾರ ನಿಗಮ ಮಂಡಳಿ ವತಿಯಿಂದ ಈ ಭವನ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಸಮಾಜದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿದೆ. ಆದರೆ ಇದುವರೆಗೂ ಸಮಾಜ ಬಾಂಧವರಿಗೆ ಉಪಯೋಗಕ್ಕೆ ಬರದಿರುವುದು ಸಮಾಜದ ಜನರ ದುರದೃಷ್ಟವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮುಖಂಡ ಗಣೇಶ ರಾಠೋಡ ಮಾತನಾಡಿ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಭವನ ಬಾಗಿಲು ಮುಚ್ಚಿಕೊಂಡು ನಿಂತಿದೆ. ಸಮಾಜದವರಿಗೆ ಹೇಳಿಕೊಳ್ಳಲಷ್ಟೇ ಸಮಾಜದ ಭವನವಿದೆ. ಆದರೆ ನೈಜವಾಗಿ ಭವನ ಮಾತ್ರ ಸಮಾಜ ಬಾಂಧವರಿಗೆ ಉಪಯೋಗಕ್ಕೆ ಇದುವರೆಗೂ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಭವನವನ್ನು ಸಮಾಜದವರಿಗೆ ಹಸ್ತಾಂತರಿಸಿ ಸಮಾಜದ ಕಾರ್ಯಕ್ರಮಗಳು ಆಗಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

ಸಮಾಜದ ಸ್ವ್ವಾಮೀಜಿ ಪ್ರಕಾಶ ಮಹಾರಾಜ್ ಸಮಾಜದ ಮುಖಂಡರಾದ ಗಣೇಶ ರಾಠೋಡ, ಮಲ್ಲು ರಾಠೋಡ, ರಾಜು ಪವಾರ, ಧನರಾಜ್ ಪವಾರ್, ಅನೀಲ ರಾಠೋಡ, ಭೀಮು ಚವ್ಹಾಣ, ರಂಗನಾಥ ಚವ್ಹಾಣ, ಸುನೀಲ ರಾಠೋಡ, ವಿಜಯ ಮೇಸ್ತ್ರಿ ರಾಠೋಡ, ಕೆಆರ್‌ಎಸ್‌ ಪಕ್ಷದ ಮುಖಂಡ ಗಣೇಶ ರಾಠೋಡ, ವಸಂತ ರಾಠೋಡ ಸೇರಿದಂತೆ ಮತ್ತಿತರರು ಇದ್ದರು.

ಕೋಟ್‌
ಬಂಜಾರ ಭವನ ಸಮಾಜದ ಜನರ ಬಳಕೆಗಾಗಿ ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು, ರಾಜಕಾರಣಿಗಳು ಗಮನಹರಿಸಬೇಕು. ಇದರಲ್ಲಿ ರಾಜಕೀಯ ಸಲ್ಲ.
 ವಿಜಯಕುಮಾರ್ ರಾಠೋಡ, ಬಂಜಾರಾ ಸಮಾಜದ ಮುಖಂಡ, ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.