ಬಸವನಬಾಗೇವಾಡಿ (ವಿಜಯಪುರ ಜಿಲ್ಲೆ): ರಾಜ್ಯ ಸರ್ಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ‘ಬಸವ ಸಂಸ್ಕೃತಿ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ರಾಜ್ಯದಾದ್ಯಂತ ಅ.1ರವರೆಗೆ ಈ ಅಭಿಯಾನ ನಡೆಯಲಿದೆ.
ಬಸವ ಜನ್ಮ ಸ್ಮಾರಕದ ಬಳಿ ಆರಂಭವಾದ ರಥಯಾತ್ರೆಯಲ್ಲಿ 1,100ಕ್ಕೂ ಅಧಿಕ ಮಹಿಳೆಯರು ತಲೆ ಮೇಲೆ ಬಸವ ವಚನ ಗ್ರಂಥ ಹೊತ್ತು ಸಾಗಿದರು. 770 ಅಮರಗಣಂಗಳ ಬಿಂಬಿಸುವ 770 ಶರಣರು ಬಸವ ಧ್ವಜ ಹಿಡಿದು ಭಾಗಿಯಾದರು.
ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ‘ಸರ್ಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಂತೆ, ಸರ್ಕಾರವೇ ಬಸವನ ಬಾಗೇವಾಡಿಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಬೇಕು’ ಎಂದರು.
ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ‘ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ರಚಿಸಿಕೊಟ್ಟರೆ, 12 ನೇ ಶತಮಾನದ ಬಸವಾದಿ ಶರಣರು ವಿಶ್ವಕ್ಕೆ ಸಲ್ಲುವ ಸಂವಿಧಾನ ನೀಡಿದ್ದಾರೆ’ ಎಂದರು.
ಸಚಿವ ಶಿವಾನಂದ ಪಾಟೀಲ, ಇಂಗಳೇಶ್ವರದ ಚನ್ನಬಸವನ ಸ್ವಾಮೀಜಿ, ನಿಷ್ಕಲ್ಮಷಮಠದ ನಿಜಗುಣಾನಂದ ಸ್ವಾಮೀಜಿ, ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶೇಗುಣಶಿ ಶ್ರೀಗಳು, ಮಸಬಿನಾಳ ಶ್ರೀಗಳು, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವನ ಬಾಗೇವಾಡಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.