ADVERTISEMENT

Basavanna: ಇಂಗ್ಲಿಷ್‌ನಲ್ಲಿ ಪಡಮೂಡಿದ ‘ಬಸವ ವಚನ’

ಬಸವರಾಜ ಸಂಪಳ್ಳಿ
Published 30 ಏಪ್ರಿಲ್ 2025, 5:17 IST
Last Updated 30 ಏಪ್ರಿಲ್ 2025, 5:17 IST
ವಿಜಯಪುರದ ಡಿವೈಎಸ್‌ಪಿ  ಬಸವರಾಜ ಯಲಿಗಾರ ಅವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ‘ಮೈ ಮಿ ಈಸ್‌ ದಿ’ ಕೃತಿಯ ಮುಖಪುಟ
ವಿಜಯಪುರದ ಡಿವೈಎಸ್‌ಪಿ  ಬಸವರಾಜ ಯಲಿಗಾರ ಅವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ‘ಮೈ ಮಿ ಈಸ್‌ ದಿ’ ಕೃತಿಯ ಮುಖಪುಟ   

ವಿಜಯಪುರ: 12ನೇ ಶತಮಾನದಲ್ಲಿ ಬಸವಣ್ಣನವರು ಜನಸಾಮಾನ್ಯರ ಆಡು ಭಾಷೆಯಲ್ಲಿ ರಚಿಸಿದ ವಚನಗಳನ್ನು ಇದೀಗ ವಿಜಯಪುರದ ಪೊಲೀಸ್‌ ಅಧಿಕಾರಿ (ಡಿವೈಎಸ್‌ಪಿ), ಸಾಹಿತಿ ಬಸವರಾಜ ಯಲಿಗಾರ ಅವರು ಇಂಗ್ಲಿಷ್‌ಗೆ ಅನುವಾದಿಸಿರುವ ‘ಮೈ ಮಿ ಈಸ್‌ ದಿ’ (ನನ್ನೊಳಗಿನ ನಾನು ನೀನೇ) ಕೃತಿ ಲೋಕಾರ್ಪಣೆಗೆ ಸಿದ್ಧವಾಗಿದೆ.

ಸಾಹಿತಿ ಯಲಿಗಾರ ಅವರು ಬಸವಣ್ಣನವರ ವಚನಗಳನ್ನು ಧ್ಯಾನಿಸಿ, ಅರ್ಥವತ್ತಾಗಿ ಹಾಗೂ ವಚನ ಸಾಹಿತ್ಯಕ್ಕೆ ಯಾವುದೇ ಕುಂದುಂಟಾಗದಂತೆ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.

ಇದುವರೆಗೆ ಅನೇಕ ಕವಿಗಳು ಬಿಡಿಬಿಡಿಯಾಗಿ ಒಂದಷ್ಟು ಶರಣರ ಆಯ್ದ ವಚನಗಳನ್ನು ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆಗಳಿಗೆ ಭಾಷಾಂತರಿಸಿದ್ದಾರೆ. ಆದರೆ, ಪ್ರಥಮ ಬಾರಿಗೆ ಯಲಿಗಾರ ಅವರು ಬಸವಣ್ಣನವರ 959 ಷಟ್‌ ಸ್ಥಲ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿರುವುದು ವಿಶೇಷ.

ADVERTISEMENT

‘ಮೈ ಮಿ ಈಸ್‌ ದಿ’ ಕೃತಿಯನ್ನು ವಿಜಯಪುರದ ‘ಅಮ್ಮ’ ಪಬ್ಲಿಕೇಷನ್‌ ಪ್ರಕಟಿಸಿದ್ದು, 808 ಪುಟಗಳನ್ನು ಒಳಗೊಂಡಿದೆ. ಇದರ ಮುಖ ಬೆಲೆ ₹ 1 ಸಾವಿರ ಇದೆ. ಮೇ 17ರಂದು ನವದೆಹಲಿಯ ಜೆಎನ್‌ಯು (ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ)ದಲ್ಲಿ ಬಿಡುಗಡೆಯಾಗಲಿದೆ.

ಕೃತಿಯ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಲೇಖಕ ಬಸವರಾಜ ಯಲಿಗಾರ, ‘ಮೈ ಮಿ ಈಸ್‌ ದಿ’  ಕೃತಿಯಲ್ಲಿ ಬಸವಣ್ಣನವರ ವಚನಗಳ ಜೊತೆಗೆ ಸುಮಾರು 100 ಪುಟಗಳಷ್ಟು ಪಂಚಾಚಾರ, ಅಷ್ಟಾವರ್ಣ, ಷಟಸ್ಥಲದ ಬಗ್ಗೆ ವಿವರಣೆ ಇದೆ. ಜೊತೆಗೆ ಅನುಬಂಧದಲ್ಲಿ ವಚನಗಳಲ್ಲಿ ಬರುವ ಪಾರಿಭಾಷಿಕ ಪದಗಳಿಗೆ ಅರ್ಥ ಕೂಡ ಬರೆಯಲಾಗಿದೆ’ ಎಂದರು.

‘ಪ್ರಥಮ ಪ್ರಯತ್ನವಾಗಿ ಬಸವಣ್ಣನವರ 1ರಿಂದ 959 ಷಟಸ್ಥಲ ವಚನಗಳನ್ನು ಪ್ರಥಮವಾಗಿ ಇಂಗ್ಲಿಷ್‌ಗೆ ಅನುವಾದ ಮಾಡಿದ್ದೇನೆ. ಇನ್ನುಳಿದ 1400ಕ್ಕೂ ಅಧಿಕ ವಚನಗಳನ್ನು ಮುಂದಿನ ಹಂತದಲ್ಲಿ ಅನುವಾದಿಸಿ ಪ್ರಕಟಿಸಲಿದ್ದೇನೆ’ ಎಂದು  ತಿಳಿಸಿದರು.

‘ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಲು ಸುಮಾರು 4 ವರ್ಷ ತೆಗೆದುಕೊಂಡಿದ್ದೇನೆ, ಕೆಲವೊಂದು ಶಬ್ಧಗಳಿಗೆ ಇಂಗ್ಲಿಷ್ ಪದಗಳಿಗಾಗಿ ವಾರಗಟ್ಟಲೇ ತಡಕಾಡಿದ್ದೇನೆ. ಪೆನ್ನು, ಹಾಳೆಯನ್ನು ಇಟ್ಟುಕೊಂಡು ಮಲಗುತ್ತಿದ್ದೆ. ಅರ್ಥ ಹೊಳೆದ ತಕ್ಷಣವೇ ಬರೆದು ಮುಗಿಸುತ್ತಿದ್ದೆ’ ಎಂದು ತಮ್ಮ ಭಾಷಾಂತರದ ಅನುಭವವನ್ನು ಹೇಳಿದರು.

ಸೊಗಸಾದ ಭಾಷಾಂತರ:

‘ಬಸವಣ್ಣನವರ ಷಟ್‌ ಸ್ಥಲ ವಚನಗಳ ಈ ಭಾಷಾಂತರ ಎರಡೂ ಭಾಷೆಗಳ ಸೊಗಸು, ಸುಖ ಬಲ್ಲವರ ಹೃದಯಕ್ಕೆ ಹತ್ತಿರವಾಗುತ್ತದೆ. ಇಲ್ಲಿ ಕೇವಲ ಪದಕ್ಕೆ ಪದವನ್ನು, ಪ್ರಾಸಕ್ಕೆ ಪ್ರಾಸವನ್ನು, ಪಾಂಡಿತ್ಯಕ್ಕೆ ಪಾಂಡಿತ್ಯವನ್ನು ಹೊಂದಿಸಲಾಗಿಲ್ಲ. ಮೂಲತಃ ವಚನಗಳು ಇಂಗ್ಲಿಷ್‌ನಲ್ಲೇ ರಚನೆಯಾದ ಸಾಹಿತ್ಯವೇನೋ ಅನ್ನಿಸುವಷ್ಟು ಸೊಗಸಾಗಿ ಮತ್ತು ಸಮರ್ಥವಾಗಿ ಭಾಷಾಂತರ ಮೂಡಿ ಬಂದಿದೆ’ ಎಂದು ಸಾಹಿತಿ ಪ್ರೊ. ರಾಗಂ ಅವರು ಕೃತಿಯ ಮುನ್ನುಡಿಯಲ್ಲಿ ಬರೆದಿದ್ದಾರೆ.

ಕನ್ನಡದಲ್ಲಿರುವ ವಚನಗಳನ್ನು ಓದಲು ಬಾರದವರಿಗೆ ಜಗತ್ತಿನ ಇತರೆ ಭಾಷಿಕರಿಗೆ ಇಂಗ್ಲಿಷ್‌ನಲ್ಲಿ ವಚನಗಳನ್ನು ಓದಿಸಿ ಅರ್ಥೈಸುವುದು ಅನುವಾದದ ಮೂಲ ಉದ್ದೇಶವಾಗಿದೆ
ಬಸವರಾಜ ಯಲಿಗಾರ ಡಿವೈಎಸ್‌ಪಿ ವಿಜಯಪುರ

ಯಲಿಗಾರ ಪರಿಚಯ

ಪೊಲೀಸ್‌ ಅಧಿಕಾರಿಯಾಗಿರುವ ಬಸವರಾಜ ಯಲಿಗಾರ ಅವರು ಮೂಲತಃ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಹದಲಿ ಗ್ರಾಮದವರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಬಿಎ ಕ್ರಿಮಿನಾಲಜಿ ಸೈಕಾಲಜಿ ಅಂಥ್ರಾಪಲಜಿ ಓದಿದ್ದಾರೆ.  1999ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾದ ಅವರು ಕೋಲಾರ ಬಾಗಲಕೋಟೆ ಬೆಳಗಾವಿ ವಿಜಯಪುರ ಕಲಬುರ್ಗಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಪ್ರಕರಣವನ್ನು ಬೇಧಿಸಿ ಇಲಾಖೆಯಿಂದ ಮೆಚ್ಚುಗೆ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.