ADVERTISEMENT

ಬಸವನಬಾಗೇವಾಡಿ: ಸಾರ್ವಜನಿಕರಿಗೆ ಡಿಜಿಟಲ್ ಭೂದಾಖಲೆಗಳ ವಿತರಣೆ ಚುರುಕು

ಭೂ ಸುರಕ್ಷಾ ಯೋಜನೆ: ಬಸವನಬಾಗೇವಾಡಿ ವ್ಯಾಪ್ತಿಯ 21.75 ಲಕ್ಷ ಪುಟಗಳ ಡಿಜಿಟಲೀಕರಣ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:08 IST
Last Updated 6 ನವೆಂಬರ್ 2025, 6:08 IST
ಬಸವನಬಾಗೇವಾಡಿ ಮಿನಿ ವಿಧಾನಸೌಧ ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ಅಧುನಿಕ ಅಭಿಲೇಖಾಲಯದಲ್ಲಿ ಸಿಬ್ಬಂದಿ ವರ್ಗ ಭೂದಾಖಲೆಗಳ ಗಣಕೀಕರಣ ಕಾರ್ಯದಲ್ಲಿ ನಿರತರಾಗಿರುವುದು
ಬಸವನಬಾಗೇವಾಡಿ ಮಿನಿ ವಿಧಾನಸೌಧ ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ಅಧುನಿಕ ಅಭಿಲೇಖಾಲಯದಲ್ಲಿ ಸಿಬ್ಬಂದಿ ವರ್ಗ ಭೂದಾಖಲೆಗಳ ಗಣಕೀಕರಣ ಕಾರ್ಯದಲ್ಲಿ ನಿರತರಾಗಿರುವುದು   

ಬಸವನಬಾಗೇವಾಡಿ: ಕಂದಾಯ ಇಲಾಖೆಯು ಭೂ ಸುರಕ್ಷಾ ಯೋಜನೆಯಡಿ ರೈತರ, ಜನಸಾಮಾನ್ಯರ ಹೊಲ, ಮನೆ ಹಾಗೂ ಆಸ್ತಿ ದಾಖಲೆ‌ಗಳನ್ನು ಸಂರಕ್ಷಿಸಿ, ಗಣಕೀಕರಣಗೊಳಿಸುವ ಕಾರ್ಯವು ಬಸವನಬಾಗೇವಾಡಿ ಮಿನಿ ವಿಧಾನಸೌಧ ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ಅಧುನಿಕ ಅಭಿಲೇಖಾಲಯದಲ್ಲಿ ಚುರುಕಾಗಿ ನಡೆಯುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ದೃಡೀಕೃತ ನಕಲು ಭೂದಾಖಲೆ ಪ್ರತಿಗಳನ್ನು ( www.recordroom.karnataka.gov.in) ತಂತ್ರಾಂಶದ ಮೂಲಕ ವಿತರಿಸಲಾಗುತ್ತಿದೆ.

ಹಾಳಾಗುವ ಸ್ಥಿತಿಯಲ್ಲಿರುವ ಹಳೆಯ ಜಮೀನು, ಆಸ್ತಿ ಭೂದಾಖಲೆಗಳು, ಕಡತಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಸಂರಕ್ಷಿಸಿ, ದಾಖಲೆಗಳಿಗಾಗಿ ರೈತರು, ಜನಸಾಮಾನ್ಯರ ಅಲೆದಾಟ ತಪ್ಪಿಸಲು, ಬೆರಳ ತುದಿಯಲ್ಲಿ ಭೂದಾಖಲೆಗಳು ಲಭ್ಯವಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೇ ಭೂ ಸುರಕ್ಷಾ ಯೋಜನೆ.

ಬಸವನಬಾಗೇವಾಡಿ ಮಿನಿವಿಧಾನಸೌಧ ಮೊದಲ‌ ಮಹಡಿಯಲ್ಲಿ ಸುಸಜ್ಜಿತ ‘ಅಧುನಿಕ ಅಭಿಲೇಖಾಲಯ‘ ಸ್ಥಾಪಿಸಿ‌ ಅಲ್ಲಿ ಜನವರಿಯಿಂದಲೇ ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಲ್ಲೂಕುಗಳನ್ನೊಳಗೊಂಡ ಅಖಂಡ ತಾಲ್ಲೂಕಿನ ಭೂದಾಖಲೆಗಳು, ಕಡತಗಳ ಇಂಡೆಕ್ಸಿಂಗ್ ಮತ್ತು ಕ್ಯಾಟಲಾಗಿಂಗ್ ಜೊತೆಗೆ ದಾಖಲೆಗಳ ಸ್ಕ್ಯಾನ್ ಮಾಡಿ ತಂತ್ರಾಂಶದಲ್ಲಿ ಅಪಲೋಡ್ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಾಲ್ಲೂಕಿಗೆ ಗುತ್ತಿಗೆ ಆಧಾರದಲ್ಲಿ 6 ಜನ ಡಾಟಾ ಎಂಟ್ರಿ ಆಪರೇಟರ್ಸ್ ನಿಯೋಜಿಸಲಾಗಿದ್ದು, ಅಭಿಲೇಖಾಲಯದಲ್ಲಿ ಒಟ್ಟು 10 ಕಂಪ್ಯೂಟರ್, 5 ಓವರ್ ಹೆಡ್ ಸ್ಕ್ಯಾನರ್, 2 ಡುಪ್ಲೆಕ್ಸ್ ಸ್ಕ್ಯಾನರ್ ಗಳ ಜೊತೆಗೆ ಕಡತಗಳನ್ನು ಸಂರಕ್ಷಿಸಿಡಲು ಅತ್ಯಾಧುನಿಕ ಕಂಪಾರ್ಟ್ಮೆಂಟ್ ನೀಡಲಾಗಿದೆ.

ADVERTISEMENT

ಮೂರು ತಾಲ್ಲೂಕುಗಳ ಪೈಕಿ ಈಗಾಗಲೇ ನಿಡಗುಂದಿ‌‌ ಹಾಗೂ ಕೊಲ್ಹಾರ ತಾಲ್ಲೂಕುಗಳ 'ಎ' ವರ್ಗ (ಶಾಶ್ವತ ದಾಖಲೆಗಳು) ಮತ್ತು 'ಬಿ' ವರ್ಗ (30 ವರ್ಷಗಳ ದಾಖಲೆಗಳು) ದಾಖೆಗಳ ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ. ಮೂಲ ತಾಲ್ಲೂಕು ಕೇಂದ್ರವಾದ ಬಸವನಬಾಗೇವಾಡಿ ತಾಲ್ಲೂಕಿಗೆ ಸಂಬಂಧಿಸಿದಂತೆ ಇಲ್ಲಿವರೆಗೂ 36,736 ಫೈಲ್ ಗಳಲ್ಲಿರುವ 12,77,030 ಪುಟಗಳನ್ನು ಮತ್ತು 3,256 ರಜಿಸ್ಟರ್ ಗಳಲ್ಲಿನ 8,98,044 ಪುಟಗಳು ಸೇರಿ ಒಟ್ಟು 21,75,074 ಪುಟಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಇನ್ನು ಬಾಕಿ ಇರುವ 8,38,612 ಪುಟಗಳ ಸ್ಕ್ಯಾನಿಂಗ್ ಕಾರ್ಯ ಚುರುಕಿನಿಂದ ನಡೆಯುತ್ತಿದೆ ಎಂದು ಅಭಿಲೇಖಾಲಯ‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಪ್ರತಿದಿನ 10 ಸಾವಿರ ದಾಖಲೆಗಳ ಗಣಕೀಕರಣ ಗುರಿಯೊಂದಿಗೆ ತಂಡವು ಕೆಲಸ ನಿರ್ವಹಿಸುತ್ತಿದ್ದು, ಬರುವ ಜನವರಿ ಮಾಸಾಂತ್ಯದೊಳಗೆ ದಾಖಲೆಗಳ ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗುವುದು. ಈಗಾಗಲೇ ಡಿಜಿಟಲೀಕರಣ ಮಾಡಿದ ಸುಮಾರು‌ 11,630 ಡಿಜಿಟಲ್ ಭೂದಾಖಲೆಗಳನ್ನು ಅರ್ಜಿದಾರರಿಗೆ ವಿತರಿಸಲಾಗಿದೆ. ಸಾರ್ವಜನಿಕರು ಆನ್ಲೈನ್ ಮೂಲಕವೂ ಡಿಜಿಟಲ್ ರೂಪದ ದಾಖಲೆಗಳನ್ನು ಪಡೆದುಕೊಳ್ಳಬಹುದು. ಇದರಿಂದ ಸಾರ್ವಜನಿಕರಿಗೆ ಕಚೇರಿಗಳ ಅಲೆದಾಟ ತಪ್ಪಿ, ಶೀಘ್ರ ದಾಖಲೆಗಳು ಸಿಗುತ್ತವೆ. ಅಲ್ಲದೇ ದಾಖಲೆಗಳು ಆನ್ಲೈನ್ ನಲ್ಲಿ ಭದ್ರವಾಗಿರುವುದಲ್ಲದೇ, ತಿದ್ದುಪಡಿ ಮಾಡಲು ಸಹ ಸಾಧ್ಯವಾಗುವುದಿಲ್ಲ‘ ಎಂದು ಬಸವನಬಾಗೇವಾಡಿ ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಭೂ ಸುರಕ್ಷಾ ಯೋಜನೆಯ ಲೋಗೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.