
ವಿಜಯಪುರ: ಬಸವನಾಡಿನಲ್ಲಿ ಜನರು ಜಾತಿಯ ಬದಲು ನೀತಿಯನ್ನು ನೋಡುತ್ತಾರೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿದ್ಯಾನಗರ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ಶನಿವಾರ ಬಬಲೇಶ್ವರ ತಾಲ್ಲೂಕಿನ ಕಾಖಂಡಕಿ ಗ್ರಾಮದಲ್ಲಿ ಉಪ್ಪಾರ ಸಮಾಜ ಸೇವಾ ಸಂಘ ಆಯೋಜಿಸಿದ್ದ ಶ್ರೀ ರಾಜಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾಮೀಜಿಗಳಿಂದ ಜ್ಞಾನ ಸವಿಯುತ್ತಾರೆ. ಫಲಾಪೇಕ್ಷೆಯಿಲ್ಲದೇ ಗುರುಗಳನ್ನು ಗೌರವಿಸುತ್ತಾರೆ. ಶಿಕ್ಷಣ, ಸಂಘಟನೆ, ಸಂಸ್ಕಾರದ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಬಸವಾದಿ ಶರಣರ ಆಶಯವಾಗಿತ್ತು. ಅನುಭವ ಮಂಟಪದ ಮೂಲಕ ಸಮಾನತೆಗೆ ಅವಕಾಶ ಕಲ್ಪಿಸಲಾಗಿತ್ತು. ಸಚಿವ ಎಂ.ಬಿ.ಪಾಟೀಲ ಈ ತತ್ವಗಳಡಿ ಕಾಯಕ ಮಾಡುತ್ತಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಕ್ಕೇರಿ ಚುಕ್ಕಾಣಿ ಹಿಡಿಯಲಿ ಎಂದರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಜಲಮೂಲಗಳ ಬಳಿ ನಾಗರಿಕತೆಗಳು ಪ್ರಾರಂಭವಾಗಿವೆ. ಆದರೆ, ಭಗೀರಥ ಮಹರ್ಷಿಗಳು ಗಂಗೆಯನ್ನು ಜಲದ ರೂಪದಲ್ಲಿ ಭೂಲೋಕಕ್ಕೆ ತಂದ ರಾಜಋಷಿಯಾಗಿದ್ದಾರೆ ಎಂದು ಹೇಳಿದರು.
ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ಈ ಹಿಂದೆ ಮಳೆಯಾಶ್ರಿತ ಬೇಸಾಯ ಮಾಡುತ್ತಿದ್ದ ರೈತರು ಸುಸ್ಥಿರ ಕೃಷಿ ಮಾಡಲು ಅನುಕೂಲವಾಗಿದೆ. ಕಾಖಂಡಕಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿದೆ. ಈಗ ಇಲ್ಲಿಗೆ ಜಲದ ರೂಪದಲ್ಲಿ ಲಕ್ಷ್ಮಿ ಬಂದಿದ್ದಾಳೆ. ಇನ್ನು ಮುಂದೆ ಸರಸ್ವತಿಯೂ ನೆಲೆಸಲಿದ್ದಾಳೆ. ಈ ಸಮುದಾಯ ಈಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು ಕಾಖಂಡಕಿ ಶ್ರೀ ನಿಜಲಿಂಗಯ್ಯ ಮಹಾಸ್ವಾಮಿಗಳು, ಚಿಕ್ಕಾಲಗುಂಡಿಯ ಶಿವಶರಣಾನಂದ ಸ್ವಾಮೀಜಿ, ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ, ಶಿಕ್ಷಕ ಲಕ್ಷ್ಮಣಗೌಡ ವಿ. ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.