ADVERTISEMENT

ಬಸವನಬಾಗೇವಾಡಿ |‘ಬಸವಣ್ಣನವರ ಸಮಸಮಾಜ ಕನಸು ನನಸು’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 5:01 IST
Last Updated 31 ಡಿಸೆಂಬರ್ 2025, 5:01 IST
ಬಸವನಬಾಗೇವಾಡಿಯಲ್ಲಿ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಹಾಗೂ ಅವರ ಪುತ್ರಿ ಭುವನಾ ಗುಳೇದಗುಡ್ಡ ಅವರ ಕೃತಿಗಳನ್ನು ಹಿರಿಯ ಸಾಹಿತಿ ರಾಜಶೇಖರ ಮಠಪತಿ ಹಾಗೂ ಗಣ್ಯರು ಬಿಡುಗಡೆಗೊಳಿಸಿದರು
ಬಸವನಬಾಗೇವಾಡಿಯಲ್ಲಿ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಹಾಗೂ ಅವರ ಪುತ್ರಿ ಭುವನಾ ಗುಳೇದಗುಡ್ಡ ಅವರ ಕೃತಿಗಳನ್ನು ಹಿರಿಯ ಸಾಹಿತಿ ರಾಜಶೇಖರ ಮಠಪತಿ ಹಾಗೂ ಗಣ್ಯರು ಬಿಡುಗಡೆಗೊಳಿಸಿದರು   

ಬಸವನಬಾಗೇವಾಡಿ: ‘ಬಸವಣ್ಣನವರ ಸಮಸಮಾಜ ನಿರ್ಮಾಣದ ಕನಸು ನನಸಾಗುತ್ತಿದೆ. ಹೆಣ್ಣು ಮಕ್ಕಳಿಗೂ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಿ ಅವರೂ ಸರ್ವ ರಂಗದಲ್ಲಿ ಮುಂದುವರಿಯಬೇಕು ಎಂಬ ಬಸವಾದಿ ಶರಣರ ಇಚ್ಛೆಯಂತೆ ಇಂದು ಹೆಣ್ಣು ಮಕ್ಕಳು ಎಲ್ಲ ರಂಗದಲ್ಲಿ ಮುಂದುವರಿದಿದ್ದಾರೆ’ ಎಂದು ಸಾಹಿತಿ ರಾಜಶೇಖರ ಮಠಪತಿ (ರಾಗಂ) ಹೇಳಿದರು.

ಪಟ್ಟಣದ ಕಾಳಿಕಾ ದೇವಸ್ಥಾನದ ಗಾಯತ್ರಿ ಭವನದಲ್ಲಿ ಇತ್ತಿಚೆಗೆ ಹಮ್ಮಿಕೊಂಡಿದ್ದ ಶಿಕ್ಷಣ ಇಲಾಖೆ ಅಧಿಕಾರಿ ಮಂಜುನಾಥ ಗುಳೇದಗುಡ್ಡ ಅವರ 3ನೇ ಕೃತಿ ‘ಖಾಲಿಯಾಗದ ಕಡಲು’ ಹಾಗೂ ಅವರ ಪುತ್ರಿ, ಯುವ ಲೇಖಕಿ ಭುವನಾ ಗುಳೇದಗುಡ್ಡ ಅವರ ಚೊಚ್ಚಲ ಕೃತಿ ‘ದಿ ಅನ್ ರಿಟನ್ ಸಿ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘ಪ್ರತಿಭೆಗೆ ವಯಸ್ಸು ಮುಖ್ಯವಲ್ಲ, 9ನೇ ತರಗತಿಯಲ್ಲಿ ಓದುತ್ತಿರುವ ಯುವ ಲೇಖಕಿ ಭುವನಾ ಗುಳೇದಗುಡ್ಡ ಆಂಗ್ಲ ಭಾಷೆಯಲ್ಲಿ ಸುಂದರ ಕೃತಿ ರಚಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಕಾವ್ಯ, ಕವಿತೆಗಳ ರಚನೆಯಲ್ಲಿ ಪುಸ್ತಕ ಚಿಕ್ಕದು, ದೊಡ್ಡದು ಎನ್ನುವುದು ಮುಖ್ಯವಲ್ಲ. ಅದರಲ್ಲಿನ ವಿಚಾರ, ಆಲೋಚನೆ, ಜ್ಞಾನಾಮೃತಗಳು ದೊಡ್ಡದಾಗಿರಬೇಕು. ಕವನ, ಕೃತಿಗಳನ್ನು ಏಕಾಂಗಿಯಾಗಿ ಕುಳಿತು ರಚಿಸುವುದು ಸಾಮಾನ್ಯ, ಆದರೆ ಶಿಕ್ಷಣ ಇಲಾಖೆ ಅಧಿಕಾರಿ ಮಂಜುನಾಥ ಗುಳೇದಗುಡ್ಡ ಅವರು ಸಂಚರಿಸುವ ವಾಹನದಲ್ಲಿ ಸಮಾಜದಲ್ಲಿನ ನೈಜ ಘಟನೆಗಳನ್ನು ಕನ್ನಡಿಯಂತೆ ತೊರಿಸುವ ‘ಖಾಲಿಯಾಗದ ಕಡಲು’ ಅದ್ಭುತ ಕೃತಿ ಎಂದು ಶ್ಲಾಘಿಸಿದರು.

ADVERTISEMENT

ಶಿಕ್ಷಕ ಸಾಹಿತಿಗಳಾದ ಸಾಹೇಬಗೌಡ ಬಿರಾದಾರ ಎರಡೂ ಕೃತಿಗಳನ್ನು ಮಾಯಾಶಂಕರ ಲುಗಾಡೆ ಪರಿಚಯಿಸಿದರು. ನಿವೃತ್ತ ಮುಖ್ಯಶಿಕ್ಷಕ ಎಸ್.ಎಸ್. ಝಳಕಿ, ನಿವೃತ್ತ ಉಪನ್ಯಾಸಕ ಕೆ.ಬಿ. ಕಡೆಮನಿ ಮಾತನಾಡಿದರು. ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ಶ್ರೀದೇವಿ ಹಿರೇಮಠ ಮತ್ತು ಮಾಧವ ಗುಡಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.