ADVERTISEMENT

ವಿಜಯಪುರ | ಎರಡು ಬಿ.ಇಡಿ ಕಾಲೇಜುಗಳ ಮಾನ್ಯತೆ ರದ್ದು: ₹ 60 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 5:33 IST
Last Updated 25 ಜುಲೈ 2025, 5:33 IST
ಶ್ರೀನಾಥ ಪೂಜಾರಿ
ಶ್ರೀನಾಥ ಪೂಜಾರಿ   

ವಿಜಯಪುರ: ‘ವಿದ್ಯಾರ್ಥಿಗಳಿಂದ ಮನಸ್ಸಿಗೆ ಬಂದಂತೆ ಡೊನೇಶನ್ ಹೆಸರಿನಲ್ಲಿ ದುಡ್ಡು ವಸೂಲಿ ಮಾಡುತ್ತಿದ್ದ ಜಿಲ್ಲೆಯ ಎರಡು  ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 3 ವರ್ಷ ರದ್ದು ಮಾಡಿದೆ. ಜೊತೆಗೆ ₹30 ಲಕ್ಷ ದಂಡ ವಿಧಿಸಿದೆ’ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ತಿಳಿಸಿದರು. 

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯಪುರ ನಗರದ ಎಸ್. ಎಂ.ಆರ್.ಕೆ ಬಿ.ಇಡಿ ಕಾಲೇಜು ಹಾಗೂ ಕುಮಾರಿ ಮೋನಿಕಾ ಕನ್ನಿ ಬಿ.ಇಡಿ ಕಾಲೇಜಿನಲ್ಲಿ ಬಿ.ಇಡಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹೆಚ್ಚುವರಿ ಡೊನೇಷನ್ ಪಡೆಯುತ್ತಿರುವ ಬಗ್ಗೆ ಮತ್ತು ಪರಿಣಿತ ಇಲ್ಲದ ಉಪನ್ಯಾಸಕರು, ಭೋದಕರು ಹಾಗೂ ಶಿಕ್ಷಕರಿಂದ ಭೋದಿಸಲಾಗುತ್ತಿರುವ ಬಗ್ಗೆ ಹಾಗೂ ಮೂಲ ಸೌಕರ್ಯಗಳಿಲ್ಲದ ಕಟ್ಟಡಗಳಲ್ಲಿ ಭೋದನೆ ಮಾಡುತ್ತಿರುವುದು ಖಚಿತವಾದ ಹಿನ್ನೆಲೆಯಲ್ಲಿ ಈ ಎರಡು ಕಾಲೇಜುಗಳ ವಿರುದ್ಧ ವಿಶ್ವವಿದ್ಯಾಲಯ ಕ್ರಮಕೈಗೊಂಡಿದೆ’ ಎಂದರು.

‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಈ ಎರಡು ಬಿ.ಇಡಿ ಮಹಾವಿದ್ಯಾಲಯಗಳ ವಿರುದ್ಧ ದಲಿತ ವಿದ್ಯಾರ್ಥಿ ಪರಿಷತ್ ದೂರು ನೀಡಿದ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸಭೆಯ ತೀರ್ಮಾನದನ್ವಯ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಮಹಾವಿದ್ಯಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ವಿಜಯಪುರದಲ್ಲಿ ನಡೆದ ವಿಶ್ವ ವಿದ್ಯಾಲಯದ 94ನೇ ಸಾಮಾನ್ಯ ಸಭೆ ಹಾಗೂ 5ನೇ ಸೀಡಿಕೇಟ್ ಸಭೆಯಲ್ಲಿ ವರದಿ ಪ್ರಸ್ತುತಪಡಿಸಿತ್ತು’ ಎಂದು ತಿಳಿಸಿದರು.

ADVERTISEMENT

‘ದಲಿತ ವಿದ್ಯಾರ್ಥಿ ಪರಿಷತ್ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಡೋನೆಷನ್ ಹಾವಳಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತ ಬರುತ್ತಿದೆ.  ದಲಿತ ವಿದ್ಯಾರ್ಥಿ ಪರಿಷತ್ ಹೋರಾಟದ ಫಲವಾಗಿ ಜಿಲ್ಲೆಯ ಎರಡು ಖಾಸಗಿ ಬಿ.ಇಡಿ ಕಾಲೇಜುಗಳ ವಿರುದ್ಧ ಕ್ರಮಜರುಗಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.

‘ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಭ್ರಷ್ಟ ಶಿಕ್ಷಣ ಸಂಸ್ಥೆಗಳ ವಿರುದ್ಧ ಕೈಗೊಂಡಿರುವ ಕ್ರಮವನ್ನು ದಲಿತ ವಿದ್ಯಾರ್ಥಿ ಪರಿಷತ್ ಸ್ವಾಗತಿಸುತ್ತದೆ. ಕೂಡಲೇ ಎರಡು ಕಾಲೇಜುಗಳಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಒಳ್ಳೆಯ ಶೈಕ್ಷಣಿಕ ವಾತಾವರಣ ಇರುವ ಮಹಾವಿದ್ಯಾಲಯಗಳಿಗೆ ವರ್ಗಾಯಿಸಬೇಕು, ಜೊತೆಗೆ ಈ ಎರಡು ಕಾಲೇಜುಗಳು  ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೊನೇಶನ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಠಿಣ ಸಂದೇಶ ರವಾನೆ ಮಾಡಬೇಕು’ ಎಂದು ಆಗ್ರಹಿಸಿದರು.

ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ವಿಜಯಪುರ ಜಿಲ್ಲಾ ಸಂಚಾಲಕ  ಅಕ್ಷಯಕುಮಾರ ಅಜಮನಿ, ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ಮುಖಂಡರಾದ ಸಂದೇಶ ಹಾಗೂ ಯಾಸೀನ್‌ ಇನಾಮದಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ಅನಧಿಕೃತ ಕಾನೂನು ಬಾಹಿರ ಸರ್ಕಾರ ನಿಯಮಗಳನ್ನು ಪಾಲಿಸದೆ ಇರುವ ಶಾಲಾ ಕಾಲೇಜು ಹಾಗೂ ಸಂಸ್ಥೆಗಳ ವಿರುದ್ಧ ನಮ್ಮ ಹೋರಾಟ ತೀವ್ರವಾಗಿರಲಿದೆ
  ಶ್ರೀನಾಥ ಪೂಜಾರಿ ಅಧ್ಯಕ್ಷ ಡಿವಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.