ADVERTISEMENT

ಭೀಮಾ ಪ್ರವಾಹ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 12:21 IST
Last Updated 20 ಅಕ್ಟೋಬರ್ 2020, 12:21 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ: ಭೀಮಾ ನದಿ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರವೂ ಭೀಮಾ ನದಿ ಪ್ರವಾಹದಿಂದ ನಲುಗಿರುವುದರಿಂದ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್‌ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ರಾಜ್ಯ ಸರ್ಕಾರಕ್ಕೆಕಳೆದ ಬಾರಿ ಕೃಷ್ಣಾ ತೀರದಲ್ಲಿ ಉಂಟಾದ ಪ್ರವಾಹ ಸಂತ್ರಸ್ತರಿಗೆ ಇದುವರೆಗೂ ಪರಿಹಾರ, ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಿರುವಾಗಭೀಮಾ ಪ್ರವಾಹ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರ ಸಶಕ್ತವಾಗಿಲ್ಲ ಎಂದರು.

ADVERTISEMENT

ಪ್ರವಾಹ, ಅತಿವೃಷ್ಟಿಯಿಂದ ರೈತರಿಗೆ ಆಗಿರುವ ಹಾನಿಯನ್ನು ಯಾರಿಂದಲೂ ತುಂಬಿಕೊಡಲು ಸಾಧ್ಯವಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಕೇವಲ ಸಾಂತ್ವಾನದ ಮಾತುಗಳಿಗೆ ಸೀಮಿತವಾಗದೇ ಅಗತ್ಯ ನೆರವು ನೀಡಬೇಕು ಎಂದು ಹೇಳಿದರು.

ರಾಷ್ಟ್ರೀಯ ನೀತಿ ರೂಪಿಸಿ:ಮಹಾರಾಷ್ಟ್ರದ ಉಜನಿ, ವೀರ್‌ ಜಲಾಶಯದಿಂದಎಷ್ಟು ಪ್ರಮಾಣದ ನೀರನ್ನುಭೀಮಾ ನದಿಗೆ ಬಿಡಲಾಗುತ್ತಿದೆ ಎಂಬುದರ ಬಗ್ಗೆ ರಾಜ್ಯಕ್ಕೆ ಖಚಿತ ಮಾಹಿತಿ ಇಲ್ಲದೇ ಇರುವುದು ಹಾಗೂ ಎರಡು ರಾಜ್ಯಗಳ ನಡುವೆ ಜಲಾಶಯಗಳ ನಿರ್ವಹಣೆ ವಿಷಯದಲ್ಲಿ ಸಮನ್ವಯ ಇಲ್ಲದಿರುವ ಪರಿಣಾಮ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕಾರಣ ಈ ಸಂಬಂಧ ರಾಷ್ಟ್ರೀಯ ನೀತಿ ರೂಪಿಸಬೇಕಾಗಿದೆ ಎಂದು ಮನವಿ ಮಾಡಿದರು.

ಮಹಾರಾಷ್ಟ್ರದ ಉಜನಿ, ವೀರ್‌ ಜಲಾಶಯಗಳ ಅವಲೋಕನ ಸಂಬಂಧ ಪ್ರತಿ ಮಳೆಗಾಲದ ಸಂದರ್ಭದಲ್ಲಿ ನಮ್ಮ ರಾಜ್ಯದ ಪ್ರತಿನಿಧಿಯೊಬ್ಬರನ್ನು ನಿಯೋಜಿಸಬೇಕು. ಆಗ ಮಾತ್ರ ಜಲಾಶಯಗಳಿಂದ ಎಷ್ಟು ನೀರನ್ನು ನದಿಗೆ ಹರಿಬಿಡಲಾಗುತ್ತದೆ ಎಂಬುದನ್ನು ಅರಿಯಲು ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಅಚಾತುರ್ಯದಿಂದ ಪ್ರವಾಹ:

ಕಲಬುರ್ಗಿಯ ಸೊನ್ನಾ ಬ್ಯಾರೇಜ್‌ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ನೀರಾವರಿ ನಿಗಮದ ಅಚಾತುರ್ಯದಿಂದ ಪ್ರವಾಹ ಪರಿಸ್ಥಿತಿ ಕೈಮೀರಿ ಹೋಗಿದೆ.ಬ್ಯಾರೇಜ್‌ನಿಂದ ಭೀಮಾ ನದಿಗೆ ಗೇಟ್‌ ತೆರೆದು ತಕ್ಷಣ ನೀರು ಹರಿಸಿದ್ದರೆ ಪ್ರವಾಹ ಪರಿಣಾಮ ಹೆಚ್ಚಾಗುತ್ತಿರಲಿಲ್ಲ ಎಂದು ಹೇಳಿದರು.

ಪರಿಹಾರ ನೀಡಿ:ಪ್ರವಾಹ ಸಂತ್ರಸ್ತರಿಗೆ ಓಬಿರಾಯನ ಕಾಲದ ಅಲ್ಪ ಪ್ರಮಾಣದ ಪರಿಹಾರ ಮೊತ್ತದ ಬದಲು ಸಂತ್ರಸ್ತರಾದವರಿಗೆ ತಲಾ ₹ ಲಕ್ಷ ಪರಿಹಾರವನ್ನು ತಕ್ಷಣ ನೀಡಬೇಕು, ಹಾನಿಯ ವರದಿ ಬಂದ ಬಳಿಕ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ತಕ್ಷಣ ಜೋಳದ ಕಣಕಿ ಸೇರಿದಂತೆ ಮೇವು ಒದಗಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.

ಭೀಮಾ ನದಿ ತೀರದಲ್ಲಿ ಪ್ರತಿ ಬಾರಿ ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿ ವರ್ಷ ಡೋಣಿ ನದಿ ಪ್ರವಾಹದಿಂದ ಜಿಲ್ಲೆಯ ಜನರು ಸಮಸ್ಯೆ ಎದುರಿಸುತ್ತಿದ್ದು,ಡೋಣಿ ನದಿಯಲ್ಲಿ ತುಂಬಿರುವ ಹೂಳು ತೆಗೆಯಲು ಹಾಗೂ ಒತ್ತುವರಿ ತೆರವಿಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯಪುರ ಜಿಲ್ಲೆಗೆ ಮಳೆ ಬಂದರೂ ಒಳಿತಿಲ್ಲ, ಮಳೆ ಬಾರದಿದ್ದರೂ ಒಳಿತಿಲ್ಲ. ಶಾಶ್ವತ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಮನವಿ ಮಾಡಿದರು.

ಇಂಡಿ ತಾಲ್ಲೂಕಿನ 16 ಕೆರೆಗಳಿಗೆ ನೀರು ತುಂಬಿಸಲು ಕೃಷ್ಣಾ ಭಾಗ್ಯ ಜಲ ನಿಗದಮ ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿರುವುದಕ್ಕೆ ರಾಜ್ಯ ಸರ್ಕಾರವನ್ನು ಅಭಿನಂದಿಸುವುದಾಗಿ ಹೇಳಿದರು.

---
ಭೀಮಾ ಪ್ರವಾಹ ನಿರ್ವಹಣೆಯಲ್ಲಿ ರಾಜ್ಯದ ಅಧಿಕಾರಿಗಳು ಎಡವಿದ್ದು ಎಲ್ಲಿ ಎಂಬುದರ ಕುರಿತು ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು.
- ಯಶವಂತರಾಯಗೌಡ ಪಾಟೀಲ,ಶಾಸಕ, ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.