ಇಂಡಿ: ಪಟ್ಟಣದಲ್ಲಿ ₹12.75 ಕೋಟಿ ವೆಚ್ಚದಲ್ಲಿ ರಾಜ್ಯಮಟ್ಟದ ನಿಂಬೆ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿ ಮತ್ತು ನಿಂಬೆ ಅಭಿವೃದ್ಧಿ ಮಂಡಳಿ ಸೌಲಭ್ಯಗಳ ಕೇಂದ್ರ ನಿರ್ಮಾಣ ಮಾಡಲಾಗುವುದು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿ ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಸಹಭಾಗಿತ್ವದಡಿ 2024-25ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ನಿಂಬೆ ಅಭಿವೃದ್ಧಿ ಮಂಡಳಿಯ ಕಟ್ಟಡಕ್ಕೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
‘ಈಗಾಗಲೇ ಮೊದಲ ಹಂತದಲ್ಲಿ ₹7.50 ಕೋಟಿ ಮಂಜೂರಾಗಿದ್ದು, ಅದರಲ್ಲಿ ಈಗ ₹1.50 ಕೋಟಿ ಬಿಡುಗಡೆಯಾಗಿದ್ದು, ಇಂಡಿಯಲ್ಲಿ ಕೇಂದ್ರ ಪ್ರಧಾನ ಕಚೇರಿಯ ಕಟ್ಟಡ ಪ್ರಾರಂಭಿಸಲಾಗುವುದು’ ಎಂದರು.
‘ಈಗಾಗಲೇ ಇಂಡಿಯ ನಿಂಬೆಗೆ ಜಿ.ಐ ಟ್ಯಾಗ್ ದೊರೆತಿದ್ದು, ಜಾಗತಿಕ ಮಟ್ಟದಲ್ಲಿ ನಿಂಬೆಯನ್ನು ರಪ್ತು ಮಾಡುವ ಕುರಿತು ಮತ್ತು ನಿಂಬೆಯ ಮೇಲೆ ಸಂಶೋಧನೆ, ಮೌಲ್ಯವರ್ಧನೆ, ಮತ್ತು ಗ್ರೆಡಿಂಗ್ ಕಾರ್ಯ ನಡೆಯಲಿದೆ’ ಎಂದರು.
ನಿಂಬೆ ಅಭಿವೃದ್ದಿ ಮಂಡಳಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಪಾಟೀಲ ಮಾತನಾಡಿ, ‘ನಿಂಬೆ ಅಭಿವೃದ್ಧಿ ಕಚೇರಿಯನ್ನು ಸರ್ಕಾರ ಪಟ್ಟಣದಲ್ಲಿ ಸ್ಥಾಪನೆ ಮಾಡಲು 2013ರಲ್ಲಿ ಪರವಾನಗಿ ನೀಡಿದೆ. ರಾಜ್ಯದಲ್ಲಿ ಶೇ60 ರಷ್ಟು ನಿಂಬೆ ಇಂಡಿ ತಾಲ್ಲೂಕಿನಲ್ಲಿ ಬೆಳೆಯುತ್ತಿದ್ದು, ಇಲ್ಲಿಯ ನಿಂಬೆ ವಿವಿಧ ರಾಜ್ಯಗಳಿಗೆ ಹೋಗುತ್ತಿದೆ. ಸಂಶೋಧನೆ ಮತ್ತು ರಪ್ತು ಮಾಡುವ ಗುರಿ ಹೊಂದಿದ್ದು, ಇಂದು ₹1.50 ಕೋಟಿ ವೆಚ್ಚದ ಕಟ್ಟಡಕ್ಕೆ ಭೂಮಿಪೂಜೆ ನೇರವೇರಿಸಿದೆ’ ಎಂದರು.
ತಹಶೀಲ್ದಾರ್ ಬಿ.ಎಸ್.ಕಡಕಬಾವಿ, ಬಸವರಾಜ ಗೊರನಾಳ, ತಮ್ಮಣ್ಣ ಪೂಜಾರಿ, ಸಂತೋಷ ವಾಲಿಕಾರ ಮಾತನಾಡಿದರು. ಇಒ ನಂದೀಪ್ ರಾಠೋಡ, ಬಾಬು ಸಾವಕಾರ ಮೇತ್ರಿ, ಅಶೋಕ ಬಿರಾದಾರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಂಹಾಂಗೀರ ಸೌದಾಗರ, ಜಾವೇದ ಮೋಮಿನ್, ಇಲಿಯಾಸ ಬೊರಾಮಣಿ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಮಹಾಂತೇಶ ಹಂಗರಗಿ, ಲೋಕೋಪಯೋಗಿ ಎಇಇ ದಯಾನಂದ ಮಠ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಭೀಮಾಶಂಕರ ಮೂರಮನ, ಹಣಮಂತ ಗೊಳ್ಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.