ADVERTISEMENT

ಬಿಸಿಲ ಧಗೆ; ಏರ್‌ಕೂಲರ್‌, ಎಸಿಗೆ ಬೇಡಿಕೆ

ಬಿಸಿಲ ಝಳಕ್ಕೆ ತತ್ತರ; ಗ್ರಾಮೀಣರ ಬಳಕೆಯಿಂದ ಬೇಡಿಕೆ ಹೆಚ್ಚಳ

ಬಾಬುಗೌಡ ರೋಡಗಿ
Published 31 ಮಾರ್ಚ್ 2019, 19:30 IST
Last Updated 31 ಮಾರ್ಚ್ 2019, 19:30 IST
ವಿಜಯಪುರದ ಎಲೆಕ್ಟ್ರಾನಿಕ್ಸ್‌ ಅಂಗಡಿಯೊಂದರಲ್ಲಿ ಏರ್‌ಕೂಲರ್‌ ಖರೀದಿ ನಡೆಸಿದ ಗ್ರಾಹಕರುಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಎಲೆಕ್ಟ್ರಾನಿಕ್ಸ್‌ ಅಂಗಡಿಯೊಂದರಲ್ಲಿ ಏರ್‌ಕೂಲರ್‌ ಖರೀದಿ ನಡೆಸಿದ ಗ್ರಾಹಕರುಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ:ಬಿಸಿಲಿನ ತಾಪ ಹೆಚ್ಚುತ್ತಿದೆ. ಮನೆಯಲ್ಲಿ ಕುಳಿತರು ಧಗೆ ಕಾಡಲಾರಂಭಿಸಿದೆ. ರಕ್ಷಣೆಗಾಗಿ ಜನರು ಅನಿವಾರ್ಯವಾಗಿ ಏರ್‌ಕೂಲರ್‌, ಎಸಿ ಖರೀದಿಗೆ ಮುಂದಾಗಿದ್ದಾರೆ.

ಬೆಳಿಗ್ಗೆ 10 ದಾಟಿತು ಎಂದೊಡನೆ ಧಗೆ ಆರಂಭವಾಗುತ್ತದೆ. ಇದು ರಾತ್ರಿಯಿಡಿ ಮುಂದುವರೆದು ನಸುಕಿನ ತನಕವೂ ಜನರನ್ನು ಹೈರಾಣಾಗಿಸುತ್ತಿದೆ. ಬಿಸಿಲ ಗಾಳಿಯೂ ಇದಕ್ಕೆ ಹೊರತಾಗಿಲ್ಲ. ಇದರಿಂದ ರಕ್ಷಿಸಿಕೊಳ್ಳಲು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಫ್ಯಾನ್, ಏರ್‌ಕೂಲರ್‌, ಎಸಿ ಖರೀದಿಗೆ ಇದೀಗ ವಿಜಯಪುರಿಗರು ಮುಗಿ ಬಿದ್ದಿದ್ದಾರೆ.

‘ಈ ಹಿಂದಿನ ವರ್ಷಗಳಲ್ಲಿ ನಗರ ಪ್ರದೇಶದ, ಅದರಲ್ಲೂ ಆರ್ಥಿಕವಾಗಿ ಸಬಲರಾಗಿರುವ ಜನರು ಏರ್‌ಕೂಲರ್‌, ಎಸಿ ಬಳಕೆ ಮಾಡುತ್ತಿದ್ದರು. ಇದರಿಂದ ಹೆಚ್ಚಿನ ಬೇಡಿಕೆ ಇರಲಿಲ್ಲ. ಆದರೆ ಈಚೆಗೆ ಗ್ರಾಮೀಣ ಪ್ರದೇಶದ ಹಾಗೂ ಮಧ್ಯಮ ವರ್ಗದ ಜನರು ಇವುಗಳ ಬಳಕೆಗೆ ಮುಂದಾಗಿದ್ದಾರೆ. ಇದರಿಂದ ಬೇಡಿಕೆಯೂ ಹೆಚ್ಚಿದೆ’ ಎಂದು ವಿಜಯಪುರದ ಭಾರತ್ ಎಲೆಕ್ಟ್ರಾನಿಕ್ಸ್‌ನ ಮಾಲೀಕ ವಿಶಾಲ ಜೈನ್‌ ತಿಳಿಸಿದರು.

ADVERTISEMENT

‘ಬೇಸಿಗೆ ಆರಂಭವಾದಾಗಿನಿಂದ ನಿತ್ಯ 30ರಿಂದ 50 ಜನರು ಎಸಿ, ಏರ್‌ಕೂಲರ್‌ ಕುರಿತಂತೆ ವಿಚಾರಿಸುತ್ತಾರೆ. ಇದರಲ್ಲಿ 10 ರಿಂದ 15 ಜನರು ಖರೀದಿ ಮಾಡುತ್ತಾರೆ. ಇಬ್ಬರು ಮೂವರು ಎಸಿ ಕೊಳ್ಳುತ್ತಾರೆ. ನಮ್ಮಲ್ಲಿ ಬ್ರ್ಯಾಂಡೆಡ್‌ ಉತ್ಪನ್ನಗಳಿವೆ.

16ರಿಂದ 60 ಲೀಟರ್‌ ಸಾಮರ್ಥ್ಯದ ಕೆನ್‌ಸ್ಟಾರ್‌ ಏರ್‌ಕೂಲರ್‌ ₹ 4,500ದಿಂದ ₹ 15,000, 17ರಿಂದ 100 ಲೀಟರ್‌ ಸಾಮರ್ಥ್ಯದ ಸಿಂಪೋನ್‌ ₹ 6000ದಿಂದ ₹ 25,000, 22ರಿಂದ 85 ಲೀಟರ್‌ ಸಾಮರ್ಥ್ಯದ ವರ್ನಾ ₹ 6,990ರಿಂದ ₹ 15,990, 20ರಿಂದ 100 ಲೀಟರ್‌ ಸಾಮರ್ಥ್ಯದ ವಿಗಾರ್ಡ್‌ ₹ 5500 ದಿಂದ ₹ 19,000 ದವರೆಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ಮನೆ ಮೇಲಂತಸ್ತಿನಲ್ಲಿದೆ. ಇಡೀ ದಿನ ಬಿಸಿಲಿನ ಝಳಕ್ಕೆ ಆರ್‌ಸಿಸಿ (ಮೇಲ್ಚಾವಣಿ) ಕಾಯುತ್ತದೆ. ಅದರಿಂದ ಬರುವ ಕಾವಿಗೆ ರಾತ್ರಿ ಮನೆಯಲ್ಲಿ ಮಲಗಲು ಆಗುತ್ತಿಲ್ಲ. ಫ್ಯಾನ್‌ ಹಚ್ಚಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಏರ್‌ಕೂಲರ್‌ ಖರೀದಿಸಲು ಬಂದಿದ್ದೇನೆ. ರೇಟ್‌ ಬಗೆಹರಿದರೆ ಕೆನ್‌ಸ್ಟಾರ್‌ ಕಂಪನಿಯ 16 ಲೀಟರ್ ಸಾಮರ್ಥ್ಯದ ಕೂಲರ್‌ ಖರೀದಿಸುವುದಾಗಿ’ ಬಸವನಗರದ ವಿಜಯ ಪತ್ತಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.