
ವಿಜಯಪುರ: ಕಳೆದ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯತ 2ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್‌ಗೆ ರಾಜ್ಯ ಸರ್ಕಾರ ಬಹಿರಂಗವಾಗಿ ಕ್ಷಮೆಯಾಚಿಸಿ, ಮೀಸಲಾತಿ ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ‘ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹೋರಾಟ ಅಪರಾಧವಲ್ಲ, ಅದು ನಾಗರಿಕರ ಹಕ್ಕು. ಶಾಂತವಾಗಿ ತಮ್ಮ ಬೇಡಿಕೆ ಮಂಡಿಸಿದ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ. ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ, ಹೋರಾಟಗಳನ್ನು ಸಂಯಮದಿಂದ ಮತ್ತು ಸಂವಾದದ ಮೂಲಕ ನಿರ್ವಹಿಸಿದ್ದವು. ಆದರೆ, ಪ್ರಸ್ತುತ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದ್ದು, ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಲಪ್ರಯೋಗದ ದಾರಿ ಹಿಡಿದಿದೆ’ ಎಂದು ಆರೋಪಿಸಿದರು.
‘ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಸಮಾನ ಅವಕಾಶಕ್ಕಾಗಿ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎ ಮೀಸಲಾತಿಗೆ ಸೇರ್ಪಡೆಗೊಳಿಸುವುದು ಅತ್ಯವಶ್ಯಕವಾಗಿದ್ದು, ಇದನ್ನು ರಾಜಕೀಯ ಮಾಡದೇ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಶೀಘ್ರವಾಗಿ ಈಡೇರಿಸಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಸುರೇಶ ಬಿರಾದಾರ, ಡಿ.ಜಿ.ಬಿರಾದಾರ, ರವಿಕಾಂತ ಬಗಲಿ, ಉಮೇಶ ಕಾರಜೋಳ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಭಾರತಿ ಬಯ್ಯಾರ, ಸ್ವಪ್ನಾ ಕಣಮುಚನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.