
ವಿಜಯಪುರ: ‘ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ಅವರ ಜೊತೆ ಕಾಣಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಿಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯಿಂದ ಆಯ್ಕೆಯಾಗಿರುವ ಕೆಲವು ಮಹಾನಗರ ಪಾಲಿಕೆ ಸದಸ್ಯರು ಉಚ್ಛಾಟಿತ ಶಾಸಕ ಯತ್ನಾಳರ ಜೊತೆ ಗುರುತಿಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.
‘ನಗರದ ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಗುರುತಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದರೆ, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರನ್ನು ಮಾಧ್ಯಮಗಳ ಎದುರು ಟೀಕಿಸುವಾಗ ಅವರ ಪಕ್ಕದಲ್ಲಿ ನಿಂತು ನಗುತ್ತಿರುವುದು ಕಂಡು ಬಂದಿದೆ. ಇದು ನಾಚಿಕೆಗೇಡಿನ ಸಂಗತಿ. ಇನ್ನು ಮುಂದೆ ಆ ರೀತಿ ಕಾಣಿಸಿಕೊಂಡರೆ ಕ್ರಮ ಕೈಗೊಳ್ಳುವುದು ನಿಶ್ಚಿತ’ ಎಂದರು.
‘ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾರ್ಯಗಳ ವಿಷಯವಾಗಿ ಯತ್ನಾಳ ಅವರೊಂದಿಗೆ ಸದಸ್ಯರು ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಇಷ್ಟು ದಿನ ಸುಮ್ಮನಿರಲಾಗಿತ್ತು. ಆದರೆ, ಪಕ್ಷದ ನಾಯಕರ ಬಗ್ಗೆಯೇ ಯತ್ನಾಳ ಟೀಕೆ-ಟಿಪ್ಪಣಿ ಮಾಡುತ್ತಿರುವಾಗಲೂ ಬಿಜೆಪಿ ಚಿಹ್ನೆ ಮೇಲೆ ಆಯ್ಕೆಯಾಗಿರುವ ಪಾಲಿಕೆ ಸದಸ್ಯರು ನಗುತ್ತಿರುವುದು ಅಸಹ್ಯಕರ. ಹಾಗೆ ನಗುವ ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ ಎಂಬ ಕನಿಷ್ಠ ಜ್ಞಾನ ಇರಬೇಕು’ ಎಂದರು.
‘ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಮತ ಹಾಕಿದ್ದಾರೆ. ಸದ್ಯ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೇ ಹೊರತು, ಉಚ್ಛಾಟಿತ ಶಾಸಕರ ಬೆಂಬಲಿಗರು ಅಲ್ಲ ಎಂಬುದು ನೆನಪಿರಬೇಕು’ಎಂದರು.
‘ಯತ್ನಾಳ ತಪ್ಪು ಮಾಡಿರುವ ಕಾರಣ ಪಕ್ಷದಿಂದ ಹೊರ ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಬಗ್ಗೆ ಪದೇ ಪದೇ ಹೇಳಿಕೆ ನೀಡುವುದು ಸರಿಯಲ್ಲ. ವಿಜಯೇಂದ್ರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಆಗುವ ಹಂತಕ್ಕೆ ಬಂದಿದ್ದಾರೆ’ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನದ ಪೂರೈಸಿದ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ಸಾವಿರ ಸಮಸ್ಯೆಗಳನ್ನು ಹುಟ್ಟುಹಾಕಿರುವುದೇ ಸರ್ಕಾರ ಸಾಧನೆಯಾಗಿದೆ ಎಂದು ಆರೋಪಿಸಿದರು.
ಮುಂದಿನ ತಿಂಗಳು ಮಂಡನೆಯಾಗಲಿರುವ ರಾಜ್ಯ ಬಜೆಟ್ ಸಂಬಂಧ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ತಕ್ಷಣವೇ ಪಕ್ಷಾತೀತವಾಗಿ ಜಿಲ್ಲೆಯ ಪ್ರಮುಖರ ಸಭೆ ಕರೆಯಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು, ಕುಡಿಯುವ ನೀರಿನ ಸಮಸ್ಯೆ ಹಾಗೂ ನಗರದಲ್ಲಿ ಮೇಲ್ಸೇತುವೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಜಿಲ್ಲೆಯ ವಿಷಯಗಳ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುರೇಶ ಬಿರಾದಾರ, ಚಿದಾನಂದ ಚಲವಾದಿ, ವಿಜಯ ಜೋಶಿ ಇದ್ದರು.
ನಾನೇ ಸಿಎಂ ಆಗುತ್ತೇನೆ ಎಂದು ಯತ್ನಾಳ ಹೇಳುವುದು ಹಾಸ್ಯಾಸ್ಪದ. ನೀವು ಸಿಎಂ ಆಗಲು ಸಾಧ್ಯವಿಲ್ಲ ವಿಜಯೇಂದ್ರ ವರ್ಚಸ್ಸು ಕಡಿಮೆ ಮಾಡಬೇಕು ಎಂಬ ಆಲೋಚನೆಯಿಂದ ಹೊರಗೆ ಬನ್ನಿ-ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.