
ವಿಜಯಪುರ: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಯಿತು.
ನಗರ ಹೊರ ವಲಯದ ವಿಜಯಪುರ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಬಳಿಯಿಂದ ಶಾಸಕ ಜನಾರ್ಧನ ರೆಡ್ಡಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ನೇತೃತ್ವದಲ್ಲಿ ಹತ್ತಾರು ಟ್ರ್ಯಾಕ್ಟರ್‌ಗಳ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು, ರೈತರು ಗಣೇಶ ನಗರ, ಜಲನಗರ, ಜಮಖಂಡಿ ರಸ್ತೆ, ಬಬಲೇಶ್ವರ ನಾಕಾ, ಶಿವಾಜಿ ಮಹಾರಾಜರ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಡಾ.ಅಂಬೇಡ್ಕರ್ ವೃತ್ತದ ವರೆಗೆ ರ‍್ಯಾಲಿ ನಡೆಸಿದರು.
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸದ ಸರ್ಕಾರಕ್ಕೆ ಧಿಕ್ಕಾರ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಫಲಕಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿರುವ ತೊಗರಿ, ಮೆಕ್ಕೆಜೋಳ, ಉಳ್ಳಾಗಡ್ಡಿ ಬೆಳೆಗಳನ್ನು ಪ್ರದರ್ಶಿಸಿ ಪರಿಹಾರಕ್ಕಾಗಿ ಹಕ್ಕೊತ್ತಾಯ ಮಾಡಿದರು.
ರೈತರಿಗಾಗಿ ಸಮಯವಿಲ್ಲ: ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಈ ರಾಜ್ಯ ಸರ್ಕಾರಕ್ಕೆ ಒಂದು ಗಂಟೆಯೂ ಸಹ ರೈತರ ಸಮಸ್ಯೆ ಬಗೆ ಹರಿಸುವುದಕ್ಕೆ ಸಮಯವಿಲ್ಲ, ಕೇವಲ ಒಂದು ತಾಸು ಸಮಯ ತೆಗೆದರೆ ರೈತರ ಎಷ್ಟೋ ಸಮಸ್ಯೆಗಳನ್ನು ಬಗೆ ಹರಿಯುತ್ತಿದ್ದವು. ಆದರೆ, ಕುರ್ಚಿ ಕಚ್ಚಾಟಕ್ಕೆ ದೊಡ್ಡ ಸಮಯವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರೈತರನ್ನು ನಿರ್ಲಕ್ಷ್ಯ ಮಾಡಲಾಗಿದೆ, ಬೆಳೆ ಪರಿಹಾರ ಪಾವತಿಯಲ್ಲಿ ವಿಳಂಬ, ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರ ಅರಂಭಕ್ಕೆ ವಿಳಂಬ ಹೀಗೆ ಅನೇಕ ವಿಳಂಬ ಧೋರಣೆ ಮೂಲಕ ಸಿಎಂ ಸಿದ್ದರಾಮಯ್ಯ ರೈತ ವಿರೋಧಿ ಅನ್ನುವುದನ್ನು ತೋರಿಸಿಕೊಟ್ಟಿದ್ದರೆ ಎಂದು ಅಕ್ರೋಶ ವ್ಯಕ್ತಡಪಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮತನಾಡಿ, ರೈತರ ಸಹನೆಯನ್ನು ರಾಜ್ಯ ಸರ್ಕಾರ ದುರಪಯೋಗಪಡಿಸಿಕೊಳ್ಳುತ್ತದೆ, ರೈತರು ಈಗ ಸಂಘರ್ಷದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇನ್ನಾದರೂ ಈ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಲಿ, ನಾವು ಇಲ್ಲಿಗೆ ಈ ಹೋರಾಟ ನಿಲ್ಲಿಸುವುದಿಲ್ಲ, ವಿಧಾನಸೌಧಕ್ಕೂ ಈ ಹೋರಾಟ ವ್ಯಾಪಿಸಲಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಸಾಬು ಮಾಶ್ಯಾಳ, ಸಂಜಯ ಪಾಟೀಲ ಕನಮಡಿ, ಕಾಸುಗೌಡ ಬಿರಾದಾರ, ಚಿದಾನಂದ ಚಲವಾದಿ, ಡಾ.ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ಸ್ವಪ್ನಾ ಕಣಮುಚನಾಳ, ಉಪಮೇಯರ್ ಸುಮಿತ್ರಾ ಜಾಧವ, ಸಂಜೀವ ಐಹೊಳಿ, ವಿಜಯ ಜೋಶಿ, ಸಂಪತ್ ಕೋವಳ್ಳಿ ಇದ್ದರು.
ರೈತರನ್ನ ಕರೆದು ಅವರ ಸಮಸ್ಯೆ ಆಲಿಸಿ ಸಮಾಧಾನ ಹೇಳಬಹುದಿತ್ತು. ಆದರೆ ಸಿಎಂ ಡಿಸಿಎಂ ಸಚಿವರಿಗೆ ತಮ್ಮ ಕುರ್ಚಿ ಚಿಂತೆ ಶಾಸಕರಿಗೆ ಸಚಿವರಾಗುವ ಚಿಂತೆಜನಾರ್ಧನ್ ರೆಡ್ಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.