ಸಿಂದಗಿ: ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಸರ್ಕಾರ ರೈತರಿಗೆ ವಿಶೇಷ ಪರಿಹಾರ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಡಲ ರೈತ ಮೋರ್ಚಾದ ನೇತೃತ್ವದಲ್ಲಿ ಅ.14 ರಿಂದ ಪಟ್ಟಣದ ತಾಲ್ಲೂಕು ಪ್ರಜಾಸೌಧ ಎದುರು ಅನಿರ್ಧಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದು ಎಂದು ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ತಿಳಿಸಿದರು.
ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಎಕರೆಗೆ ₹ 25 ಸಾವಿರ ಬೆಳೆ ಹಾನಿ ಪರಿಹಾರವನ್ನು ತಕ್ಷಣವೇ ಘೋಷಿಸಬೇಕು. ಅತಿಯಾದ ಮಳೆಯಿಂದ ಪೂರ್ತಿ ಕುಸಿದ ಮನೆಗೆ ₹1.25 ಲಕ್ಷ , ಭಾಗಶ: ಕುಸಿದ ಮನೆಗೆ ರ್ 50 ಸಾವಿರ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಿಜೆಪಿ ಪ್ರದಾನಕಾರ್ಯದರ್ಶಿ ಗುರು ತಳವಾರ ಮಾತನಾಡಿದರು.
ಬಿಜೆಪಿ ವಿವಿಧ ಮೋರ್ಚಾಗಳ ಅಧ್ಯಕ್ಷ ಪ್ರಶಾಂತ ಕದ್ದರಕಿ, ಅಶೋಕ ನಾರಾಯಣಪೂರ, ಶಮಿ ಬಿಜಾಪೂರ ಹಾಗೂ ಪಕ್ಷದ ಮುಖಂಡರಾದ ಬಂಗಾರೆಪ್ಪಗೌಡ ಬಿರಾದಾರ, ಮಲ್ಲೂ ಸಾವಳಸಂಗ ಇದ್ದರು.
ಶೀಘ್ರದಲ್ಲಿ ಉತ್ತರ
ಶಾಸಕ ಅಶೋಕ ಮನಗೂಳಿ ಅವರ ವಿರುದ್ಧ ನಾನು ಮಾಡಿದ ಆರೋಪ ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ನನಗೆ ಸವಾಲು ಹಾಕಿದ್ದರು. ದೀಪಾವಳಿಯ ನಂತರ ಪಟಾಕಿ ಸಿಡಿಸಿ ತಕ್ಕ ಉತ್ತರ ನೀಡುವೆ ಎಂದು ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ಸ್ಪಷ್ಟನೆ ನೀಡಿದರು. ಗೋಲಗೇರಿ ಭಾಗದ 10 ಗ್ರಾಮಗಳಲ್ಲಿ ಶಾಸಕ ಮನಗೂಳಿ ಎರಡೂವರೆ ವರ್ಷದಲ್ಲಿ ಒಂದೇ ಒಂದು ಕಿಮೀ ಡಾಂಬರೀಕರಣ ರಸ್ತೆ ಮಾಡಿದ್ದರೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ನಾನು ಹಾಕಿದ ಸವಾಲ್‌ಗೆ ಶಾಸಕರು ಮೌನ ವಹಿಸಿದ್ದೇಕೆ ಎಂದು ಭೂಸನೂರ ಪ್ರಶ್ನಿಸಿದರು. ಉಪಚುನಾವಣೆಯಲ್ಲಿ ನನ್ನ ಗೆಲುವು ಆದ ನಂತರ ಕೇವಲ 16 ತಿಂಗಳ ಅವಧಿಯಲ್ಲಿ 90 ಕಿಮೀ ಡಾಂಬರೀಕರಣ ರಸ್ತೆ ಮಾಡಿ ತೋರಿಸಿದ್ದೇನೆ. ಬೇಕಿದ್ದರೆ ಪಟ್ಟಿ ಕೊಡುವೆ ಎಂದು ಮಾಜಿ ಶಾಸಕ ಭೂಸನೂರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.