ಬಿಜೆಪಿ
ವಿಜಯಪುರ: ‘ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮುಸ್ಲಿಮರಿಗೂ ಟಿಕೆಟ್ ನೀಡಿ, ಅವರ ಗೆಲುವಿಗೂ ಪ್ರಯತ್ನಿಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ದೇಶಭಕ್ತರ ಪಕ್ಷವಾಗಿದ್ದು, ಅಲ್ಪಸಂಖ್ಯಾತರ ವಿರೋಧಿಯಲ್ಲ. ದೇಶಭಕ್ತಿ ಹೊಂದಿರುವ ಮುಸ್ಲಿಮರಿಗೂ ಬಿಜೆಪಿಯಲ್ಲಿ ಅವಕಾಶವಿದೆ’ ಎಂದರು.
‘ಬಿಜೆಪಿಯ ಮೂಲ ಉದ್ದೇಶವೇ ದೇಶಭಕ್ತಿ. ಹಿಂದೂಗಳ ರಕ್ಷಣೆಯೊಂದಿಗೆ ಎಲ್ಲ ಧರ್ಮದವರನ್ನು ರಕ್ಷಿಸುವ ಕೆಲಸ ಬಿಜೆಪಿ ಮಾಡುತ್ತದೆ. ಯಾವತ್ತೂ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಪಕ್ಷವಲ್ಲ. ಒಂದು ವೇಳೆ, ಅಲ್ಪಸಂಖ್ಯಾತರ ವಿರೋಧಿಯಾಗಿದ್ದರೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುತ್ತಿರಲಿಲ್ಲ. ಪ್ರತಿಯೊಬ್ಬ ದೇಶ ಭಕ್ತರಿಗೆ ಪಕ್ಷದಲ್ಲಿ ಅವಕಾಶ ಇದೆ. ಇದೇ ವೇಳೆ, ದೇಶವಿರೋಧಿ ಯಾರೇ ಆಗಿದ್ದರೂ, ಅವರನ್ನು ಪಕ್ಷ ಸಹಿಸುವುದಿಲ್ಲ’ ಎಂದರು.
ಯತ್ನಾಳರಿಂದ ಹಿನ್ನೆಡೆ:
‘ವಿಜಯಪುರ ನಗರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ, ಬಿಜೆಪಿಯಿಂದ ಹಿಂದು ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೂ-ಮುಸ್ಲಿಂ ವಿಚಾರ ಹೆಚ್ಚು ಮುನ್ನೆಲೆಗೆ ಬರುತ್ತದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹಿಂದೂಗಳ ಮತ ಪಡೆಯಲು ಅಲ್ಪಸಂಖ್ಯಾತರ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ಇದರಿಂದಾಗಿ ಜಿಲ್ಲೆಯ ಇತರ ಮತಕ್ಷೇತ್ರಗಳಲ್ಲಿರುವ ಬಿಜೆಪಿ ಅಭ್ಯರ್ಥಿಗಳಿಗೂ ಹಿನ್ನೆಡೆಯಾಗುತ್ತಿತ್ತು’ ಎಂದು ಹೇಳಿದರು.
‘ಈಗ ಬಿಜೆಪಿಯ ಹಿರಿಯ ನಾಯಕರ ಬಗ್ಗೆಯೂ ಯತ್ನಾಳ ಮಾತನಾಡುತ್ತಾ, ಹಿಂದೂಗಳ ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹೇಂದ್ರಕುಮಾರ ನಾಯಿಕ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಇದ್ದರು.
ವಿಜಯೇಂದ್ರ ಪ್ರವಾಸ ಮುಂದೂಡಿಕೆ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜಿಲ್ಲಾ ಪ್ರವಾಸವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಗುರುಲಿಂಗಪ್ಪ ಅಂಗಡಿ ತಿಳಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆ ಕುರಿತು ಜನರಿಗೆ ತಿಳಿಸಲು ಮತ್ತು ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಆ.2ರಂದು ಬೆಳಗಾವಿ ವಿಭಾಗೀಯ ಮಟ್ಟದ ಸಭೆಗೆ ವಿಜಯೇಂದ್ರ ಬರಬೇಕಿತ್ತು. ಆದರೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅದೇ ದಿನ ಬೆಂಗಳೂರಿಗೆ ಬರಲಿದ್ದಾರೆ. ಆದ್ದರಿಂದ ವಿಜಯೇಂದ್ರ ಪ್ರವಾಸ ಮುಂದೂಡಲಾಗಿದೆ ಎಂದರು.
ವಿಜಯೇಂದ್ರ ಪ್ರವಾಸ ಕುರಿತು ಶಾಸಕ ಯತ್ನಾಳ ಈಗಾಗಲೇ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಯತ್ನಾಳ ಬಗ್ಗೆ ಭಯಪಡುವ ಹಾಗೂ ಅವರನ್ನು ಕೇಳಿಕೊಂಡು ವಿಜಯೇಂದ್ರ ಪ್ರವಾಸ ನಿಗದಿ ಮಾಡುವ ಅವಶ್ಯಕತೆ ನಮ್ಮ ಪಕ್ಷಕ್ಕೆ ಇಲ್ಲ. ಆದರೆ ಜನರಲ್ಲಿ ತಪ್ಪು ಸಂದೇಶ ಹೋಗಬಾರದು ಹಾಗೂ ಅನಿವಾರ್ಯ ಕಾರಣಗಳಿಂದಾಗಿ ಪ್ರವಾಸ ಮುಂದೂಡಲಿದೆ ಎಂಬ ಮಾಹಿತಿ ರವಾನಿಸುವುದು ಅವಶ್ಯವಾಗಿದೆ ಎಂದರು.
ನಾನಂತೂ ಜಾತ್ಯತೀತ ವ್ಯಕ್ತಿವಾಗಿದ್ದು ದೇಶಭಕ್ತರ ತಂಡ ಕಟ್ಟಿಕೊಂಡು ಪಕ್ಷ ಮುನ್ನಡೆಸುತ್ತೇನೆ. ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳನ್ನು ತರುವಲ್ಲಿ ಸಹ ಪ್ರಯತ್ನ ಮಾಡುತ್ತೇನೆ.- ಗುರುಲಿಂಗಪ್ಪ ಅಂಗಡಿಅಧ್ಯಕ್ಷ ಬಿಜೆಪಿ ವಿಜಯಪುರ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.