ADVERTISEMENT

ಅತಿವೃಷ್ಟಿ: ಚಡಚಣ, ತಿಕೋಟಾ ಸೇರ್ಪಡೆ ಶೀಘ್ರ ಎಂದ ಸಚಿವೆ ಶಶಿಕಲಾ ಜೊಲ್ಲೆ

ಕರ್ನಾಟಕ ರಾಜ್ಯೋತ್ಸವದಲ್ಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 11:45 IST
Last Updated 1 ನವೆಂಬರ್ 2020, 11:45 IST
ವಿಜಯಪುರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ನೂತನ ಪಶು ಶಸ್ತ್ರ ಚಿಕಿತ್ಸಾ ವಾಹನ(ಅಂಬುಲೆನ್ಸ್‌)ವನ್ನು ಸೇವೆಗೆ ಸಮರ್ಪಿಸಿದರು –ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ನೂತನ ಪಶು ಶಸ್ತ್ರ ಚಿಕಿತ್ಸಾ ವಾಹನ(ಅಂಬುಲೆನ್ಸ್‌)ವನ್ನು ಸೇವೆಗೆ ಸಮರ್ಪಿಸಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ನೆರೆ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಚಡಚಣ ಮತ್ತು ತಿಕೋಟಾ ತಾಲ್ಲೂಕುಗಳನ್ನು ಸಹ ಅತಿವೃಷ್ಟಿ ಪೀಡಿತ ತಾಲ್ಲೂಕು ಎಂದು ಘೋಷಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದಅವರು, ಈಗಾಗಲೇ ಜಿಲ್ಲೆಯ 10 ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಮಳೆ, ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಸಂತ್ರಸ್ತರಾದವರಿಗೆ ₹ 10 ಸಾವಿರ, ದಕ್ಷಿಣ ಕರ್ನಾಕದವರಿಗೆ ₹ 25 ಸಾವಿರ ಪರಿಹಾರ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂಬ ಶಾಸಕ ಬಸನಗೌಡ ಪಾಟೀಲ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಪರಿಶೀಲಿಸಿ, ಅನ್ಯಾಯವಾಗಿದ್ದರೆ ತಕ್ಷಣ ಸರಿಪಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಮನೆಗಳಿಗೆ ಪ್ರವಾಹ, ಮಳೆ ನೀರು ನುಗ್ಗಿ ನಷ್ಟ ಅನುಭವಿಸಿದ ಜಿಲ್ಲೆಯ 4041 ಕುಟುಂಬಗಳಿಗೆ ತಲಾ ₹10 ಸಾವಿರ ಪರಿಹಾರ ಧನ ನೀಡಲಾಗಿದೆ ಎಂದರು.

ಸಮೀಕ್ಷೆಯ ಪ್ರಕಾರ 4 ಸಾವಿರಕ್ಕೂ ಹೆಚ್ಚಿನ ಮನೆಗಳು, ₹ 1311 ಕೋಟಿ ಅಂದಾಜು ಮೌಲ್ಯದ ಬೆಳೆ ಹಾಗೂ ಮೂಲಸೌಲಭ್ಯಗಳು ಅತಿವೃಷ್ಟಿ, ಪ್ರವಾಹದಿಂದಾಗಿ ಹಾನಿಯಾಗಿದೆ ಎಂದು ಹೇಳಿದರು.

₹ 125 ಕೋಟಿ ಮಂಜೂರು: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ವಿಜಯಪುರ ನಗರಕ್ಕೆ ಮಂಜೂರಾಗಿದ್ದ ₹125 ಕೋಟಿಯನ್ನು ರಾಜ್ಯ ಸರ್ಕಾರ ನೀಡಲು ಒಪ್ಪಿದೆ. ಇದರಿಂದ ನಗರದ ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದು ಹೇಳಿದರು.

‘ಯತ್ನಾಳಣ್ಣಗೆ ಹಾಗೇಕೆ ಅನ್ನಿಸಿತೋ ಗೊತ್ತಿಲ್ಲ’
ವಿಜಯಪುರ: ಬಿ.ಎಸ್‌.ಯಡಿಯೂರಪ್ಪ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ನನಗನಿಸುವುದಿಲ್ಲ’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ಜೊಲ್ಲೆ, ‘ಯತ್ನಾಳಣ್ಣಗೆ ಹಾಗೇಕೆ ಅನ್ನಿಸಿತೋ ನನಗೆ ಗೊತ್ತಿಲ್ಲ’ ಎಂದರು.

ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಆದರೆ,ಯತ್ನಾಳ ಅವರು ವಿರುದ್ಧ ಹೀಗೆಕೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.