ADVERTISEMENT

ಶಾಸಕಾಂಗ ಪಕ್ಷದ ಸಭೆ ಕರೆಯಿರಿ: ಯತ್ನಾಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 16:28 IST
Last Updated 31 ಡಿಸೆಂಬರ್ 2020, 16:28 IST
ವಿಜಯಪುರ ಮಹಾನಗರ ಪಾಲಿಕೆಯಿಂದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ  ಲಲಿತ್‌ ಮಹಲ್‌ ಹೋಟೆಲ್‌ ವರೆಗೆ ನಿರ್ಮಿಸಲು ಉದ್ದೇಶೀಸಿರುವ ಸಿ.ಸಿ ರಸ್ತೆ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿದರು
ವಿಜಯಪುರ ಮಹಾನಗರ ಪಾಲಿಕೆಯಿಂದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ  ಲಲಿತ್‌ ಮಹಲ್‌ ಹೋಟೆಲ್‌ ವರೆಗೆ ನಿರ್ಮಿಸಲು ಉದ್ದೇಶೀಸಿರುವ ಸಿ.ಸಿ ರಸ್ತೆ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿದರು   

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜನವರಿ 4 ಮತ್ತು 5ರಂದು ವಿಭಾಗವಾರು ಶಾಸಕರ ಸಭೆ ಕರೆದಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಭಾಗವಾರು ಶಾಸಕರ ಸಭೆ ಬದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿದರು.

ಮಹಾನಗರ ಪಾಲಿಕೆಯಿಂದ ₹ 83.05 ಲಕ್ಷ ಅನುದಾನದಲ್ಲಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಲಲಿತ್‌ ಮಹಲ್‌ ಹೋಟೆಲ್‌ ವರೆಗೆ ನಿರ್ಮಿಸಲು ಉದ್ದೇಶೀಸಿರುವ ಸಿ.ಸಿ ರಸ್ತೆ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಹಿಂದೆಯೂ ವಿಭಾಗವಾರು ಸಭೆ ಕರೆಯಲಾಗಿತ್ತು. ಅಂದು ಕೆಲವು ಯೋಜನೆಗಳಿಗೆ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರೂ ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ವಿಭಾಗವಾರು ಸಭೆ ವಿಫಲವಾಗಿದೆ ಎಂದರು.

ADVERTISEMENT

ಶಾಸಕಾಂಗ ಪಕ್ಷದ ಸಭೆ ಕರೆದು, ಅಭಿವೃದ್ಧಿ ಕಾರ್ಯಗಳ ಮೇಲೆ ಬೆಳಕು ಚೆಲ್ಲಲು ಅವಕಾಶ ಮಾಡಿಕೊಡಬೇಕು ಹಾಗೂ ಶಾಸಕರ ಆಹವಾಲು ಆಲಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಭೇಟಿಗೆಶಾಸಕರು ಹೋದರೆ ಸಿಗುತ್ತಿಲ್ಲ. ಭವಿಷ್ಯ ಅವರು ಅನಾರೋಗ್ಯ ಕಾರಣದಿಂದ ಸಿಗುತ್ತಿಲ್ಲ ಎಂದು ಭಾವಿಸುತ್ತೇನೆ ಎಂದು ಕುಟುಕಿದರು.

ವಿವಿಧ ನಿಗಮ, ಮಂಡಳಿ, ಸ್ಥಳೀಯ ಪ್ರಾಧಿಕಾರಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ, ನಾಮನಿರ್ದೇಶನ ಮಾಡುವಾಗಲೂ ಸಹ ಮುಖ್ಯಮಂತ್ರಿಗಳು ಶಾಸಕರನ್ನು ಕಡೆಗಣಿಸಿದ್ದಾರೆ. ಅನೇಕ ಕಾರ್ಯಕರ್ತರಿಗೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ್, ಸರೋಜಿನಿ ಎವೂರ, ವಿಕ್ರಮ್ ಗಾಯಕವಾಡ, ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕ ಸಾಯಿಬಣ್ಣ ಭೋವಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ್ ಅಣ್ಣಿಗೇರಿ, ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್, ಪಾಲಿಕೆ ಮಾಜಿ ಸದಸ್ಯರಾದ ರಾಹುಲ್ ಜಾಧವ್, ಅಶೋಕ ಬೆಲ್ಲದ, ರಾಜೇಶ್ ದೇವಗೇರಿ,ಸಂಜಯ್ ಪಾಟೀಲ ಕನಮಡಿ, ಸಂತೋಷ ಪಾಟೀಲ, ನಾಗೇಂದ್ರ ಯಾಧವ್, ಪ್ರಕಾಶ ರಾಠೋಡ,ಚಂದ್ರು ಚೌಧರಿ,ದಾದಾಸಾಹೇಬ್ ಬಾಗಾಯತ್, ಬಸವರಾಜ ಬಿರಾದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.