ADVERTISEMENT

ಆಲಮಟ್ಟಿ | ಕಾಲುವೆಗಳಿಂದ 136 ಕೆರೆಗಳ ಭರ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:08 IST
Last Updated 8 ಫೆಬ್ರುವರಿ 2026, 3:08 IST
ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಲು, ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಸ್ಥಾವರದ ಮೂಲಕ ಶನಿವಾರ ನೀರು ಹರಿಸಲಾಯಿತು
ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಲು, ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಸ್ಥಾವರದ ಮೂಲಕ ಶನಿವಾರ ನೀರು ಹರಿಸಲಾಯಿತು   

ಆಲಮಟ್ಟಿ: ಜನ, ಜಾನುವಾರು ಕುಡಿಯುವ ನೀರಿನ ಉದ್ದೇಶದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ಜಾಲಗಳ ಮೂಲಕ ವಿಜಯಪುರ ಜಿಲ್ಲೆಯ 124 ಮತ್ತು ಬಾಗಲಕೋಟೆ ಜಿಲ್ಲೆಯ 12 ಸೇರಿ ಸುಮಾರು 136 ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆ ಶನಿವಾರ ಆರಂಭಗೊಂಡಿದೆ.

ಮುಳವಾಡ ಏತ ನೀರಾವರಿ (ಎಂಎಲ್ಐ) ಮತ್ತು ಚಿಮ್ಮಲಗಿ ಏತನೀರಾವರಿ, ಹೆರಕಲ್ಲ ಏತ ನೀರಾವರಿ ಯೋಜನೆಗಳು ಸೇರಿ ಈ ಮೂರು ಯೋಜನೆಗಳ ಹಂತ–2 ಮತ್ತು ಹಂತ-3 ಕಾಲುವೆಗಳ ಜಾಲಕ್ಕೆ ನೀರು ಹರಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ಕೆರೆಗಳ ಭರ್ತಿಗಾಗಿ 7 ಟಿಎಂಸಿ ಅಡಿ ನೀರು ಮೀಸಲಿರಿಸಿದ್ದು, ಈಗಾಗಲೇ ಕಳೆದ ಡಿಸೆಂಬರ್ ನಿಂದ ಜನವರಿಗೆ 9ರ ವರೆಗೆ 7 ಟಿಎಂಸಿ ಅಡಿ ಪೈಕಿ 0.78 ಟಿಎಂಸಿ ಅಡಿ ನೀರನ್ನು ಕೆರೆಗಳಿಗೆ ಹರಿಸಲಾಗಿತ್ತು. ಬೇಸಿಗೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕೆರೆಗಳಲ್ಲಿರುವ ನೀರಿನ ಸಂಗ್ರಹ ಕಡಿಮೆಯಾದ ಕಾರಣ ಕೆರೆಗಳಿಗೆ ನೀರು ಹರಿಸಲು ರೈತರು ಆಗ್ರಹಿಸಿದ್ದರು. ಕಳೆದ ವಾರ ಎಂಎಲ್ ಐ ಕಾಲುವೆಯ ಮುಖ್ಯ ಸ್ಥಾವರ ಮಸೂತಿ ಬಳಿ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.

ADVERTISEMENT

ಜಿಲ್ಲೆಯ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಮೌಖಿಕವಾಗಿ ಕೋರಿದ್ದರು. ಅದಕ್ಕಾಗಿ ಬಾಕಿ ಉಳಿದ 6.11 ಟಿಎಂಸಿ ಅಡಿ ನೀರಲ್ಲಿ 1.50 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗಾಗಿ ಬಳಸಲು ಆರ್.ಬಿ. ತಿಮ್ಮಾಪುರ ಅನುಮತಿ ನೀಡಿದ್ದು, ಶೇ 80ಕ್ಕಿಂತ ಕಡಿಮೆ ನೀರು ಸಂಗ್ರಹವಿರುವ ಕೆರೆಗಳಿಗೆ ನೀರು ಹರಿಸಲು ಆರಂಭಗೊಂಡಿದೆ.

ಎಂಎಲ್ ಐ ಕಾಲುವೆಗಳಿಗೆ 1 ಟಿಎಂಸಿ ಅಡಿ, ಚಿಮ್ಮಲಗಿ ಏತ ನೀರಾವರಿ ಯೋಜನೆಗೆ 0.44 ಟಿಎಂಸಿ ಅಡಿ, ಹೆರಕಲ್ ಏತ ನೀರಾವರಿ ಯೋಜನೆಗೆ 0.06 ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ. ಕೆರೆಗಳ ಭರ್ತಿಯಾದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಲು ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಐಸಿಸಿ ಅಧ್ಯಕ್ಷ ಸಚಿವ ಆರ್.ಬಿ. ತಿಮ್ಮಾಪುರ ಅವರ ಅನುಮತಿಯ ಮೇರೆಗೆ ಕೆರೆಗಳ ಭರ್ತಿಗೆ ಮೀಸಲಿರಿಸಿದ್ದ ನೀರಿನ ಪೈಕಿ 1.50 ಟಿಎಂಸಿ ಅಡಿ ನೀರನ್ನು ಶನಿವಾರದಿಂದ ಕಾಲುವೆಗೆ ಹರಿಸಲಾಗುತ್ತಿದೆ
ಡಿ. ಬಸವರಾಜ ಮುಖ್ಯ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.