ADVERTISEMENT

ಹಿಂದೂ ಧರ್ಮ ಒಡೆಯಲು,ಕಾಂಗ್ರೆಸ್‌ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಷಡ್ಯಂತ್ರ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:29 IST
Last Updated 22 ಸೆಪ್ಟೆಂಬರ್ 2025, 4:29 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ವಿಜಯಪುರ:‌ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮವನ್ನು ಒಡೆಯಲು ಹಾಗೂ ತನ್ನ ಮತ ಬ್ಯಾಂಕ್ ರಾಜಕಾರಣಕ್ಕಾಗಿ ದೊಡ್ಡ ಷಡ್ಯಂತ್ರ ಮಾಡುತ್ತಿದೆ. ಸಮೀಕ್ಷೆ ನಿಲ್ಲಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬ್ರಿಟಿಷರು ಸೇರಿದಂತೆ ಬೇರೆ-ಬೇರೆಯವರು 600 ವರ್ಷ ಆಳ್ವಿಕೆ ನಡೆಸಿದ್ದಾರೆ. ಆದರೆ, ಯಾರೂ ಹಿಂದೂ ಧರ್ಮಕ್ಕೆ ಕೈಹಾಕಿರಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಹೆಸರಲ್ಲಿ ಹಿಂದೂ ಧರ್ಮಕ್ಕೆ ಕೈಹಾಕಿದೆ ಎಂದು ಆರೋಪಿಸಿದರು.

ಇದೇ ಜಾತಿಗಣತಿ ಬಗ್ಗೆ ಇತ್ತೀಚೆಗೆ ಸಿದ್ದರಾಮಯ್ಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಾಲ್ವರು ಸಚಿವರನ್ನು ಹೊರತುಪಡಿಸಿ, ಉಳಿದೆಲ್ಲ ಸಚಿವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ. ಆದರೆ, ವಿರೋಧಿಸಿದ ಸಚಿವರ ಹೆಸರನ್ನು ರಾಹುಲ್, ಸೋನಿಯಾ ಗಾಂಧಿಗೆ ರವಾನಿಸಿ, ನಿಮ್ಮನ್ನು ಮಂತ್ರಿಮಂಡಲದಿಂದ ವಜಾ ಮಾಡುವುದಾಗಿ ಬೆದರಿಸಲಾಗಿದೆ. ಇಂತಹ ದುರಾಡಳಿತ ಬ್ರಿಟಿಷರ ಕಾಲದಲ್ಲೂ ನಡೆದಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕ್ರೈಸ್ತ ಹಿಂದೂ, ಕ್ರೈಸ್ತ ಮಾದಿಗ, ಕ್ರೈಸ್ತ ಪಂಚಮಸಾಲಿ, ಕ್ರೈಸ್ತ ಗಾಣಿಗ, ಕ್ರೈಸ್ತ ಲಂಬಾಣಿ ಎಂಬ ಜಾತಿಗಳು ಎಲ್ಲಿಂದ ಬಂದಿವೆ?  ಒಬ್ಬ ವ್ಯಕ್ತಿ ಧರ್ಮಾಂತರಗೊಂಡರೆ, ಹಿಂದಿನ ಧರ್ಮದ ಪೂರ್ವಾಶ್ರಮದ ಎಲ್ಲ ಸಂಬಂಧ ಕಡಿದುಕೊಳ್ಳುತ್ತದೆ. ಮತಾಂತರಗೊಂಡ ದಿನದಿಂದಲೇ ಹಿಂದೂ ಸಮಾಜಕ್ಕೆ ಸಂಬಂಧವಿರಲಿಲ್ಲ. ಇದರ ಪರಿಜ್ಞಾನವೂ ಇಲ್ಲವೇ?  ಇದಲ್ಲದೇ, ಜೈನ ಪಂಚಮಸಾಲಿ ಎಂಬ ಹೊಸ ಜಾತಿಯನ್ನೇ ಸೃಷ್ಟಿಸಿರುವುದು ಆಶ್ಚರ್ಯ ತಂದಿದೆ. ಹೀಗಾಗಿ ಬಡವರಿಗೆ ಮಾಡುವ ಮೋಸದಾಟವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ಉಮೇಶ ಕಾರಜೋಳ, ಸಂಜಯ ಪಾಟೀಲ ಕನಮಡಿ, ರವೀಂದ್ರ ಲೋಣಿ, ಸ್ವಪ್ನಾ ಕಣಮುಚನಾಳ, ಶಿಲ್ಪಾ ಕುದರಗೊಂಡ, ವಿಜಯ ಜೋಶಿ ಇದ್ದರು.

ಜಾತಿ ಗಣಿತಿ ಹಿಂದೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮಾರ್ಗದರ್ಶನ ಇದ್ದು ಅವರ ತಾಳಕ್ಕೆ ತಕ್ಕಂತೆ ಸಿದ್ದರಾಮಯ್ಯ ಕುಣಿಯುತ್ತಿದ್ದಾರೆ.  ಭಾರತವನ್ನು ಕ್ರಿಶ್ಚಿಯನ್‌ಮಯ ಮಾಡುವ ಹುನ್ನಾರ ಇದೆ
ಗೋವಿಂದ ಕಾರಜೋಳಸಂಸದ  

ಬೌದ್ಧ ಧರ್ಮ ನಮೂದಿಸಿ: ಬಸವರಾಜ ಹೊಳ್ಕರ್‌

ವಿಜಯಪುರ: ಹಿಂದುಳಿದ ವರ್ಗಗಳ ಆಯೋಗದ ನಡೆಸುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ಡಾ. ಬಿ.ಆರ್‌.ಅಂಬೇಡ್ಕರ್ ಅನುಯಾಯಿಗಳು ತಮ್ಮ ಧರ್ಮ ಬೌದ್ಧ ಎಂದು ದಾಖಲಿಸುವಂತೆ ಜನಜಾಗೃತಿ ಮೂಡಿಸಬೇಕು ಎಂದು ಬುದ್ದಿಸ್ಟ್ ಸಮಾಜದ ರಾಜ್ಯ ಕಾರ್ಯದರ್ಶಿ ಬಸವರಾಜ ಹೊಳ್ಕರ್‌ ಹೇಳಿದರು. ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಬೌದ್ಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಬೌದ್ಧ ಉಪಸಕರು ಎಲ್ಲಾ ದಲಿತ ಸಂಘಟನೆಗಳ ನಾಯಕರು ಮತ್ತು ಎಲ್ಲಾ ಸಮಾಜದ ಮುಖಂಡರುಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಎಲ್ಲಾ ಶೊಷೀತ ಸಮುದಾಯದ ಜಾತಿಗಳು ತಮ್ಮ ಧರ್ಮದ ಕಾಲಂನಲ್ಲಿ (ಕಾಲಂ ನಂ.8) ಬೌದ್ಧ (ಕ್ರಮ ಸಂಖ್ಯೆ 6) ಎಂದು ತಮ್ಮ ಜಾತಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ತಮ್ಮ ಮೂಲ ಜಾತಿ ಹೊಲೆಯ ಛಲವಾದಿ ಮಾದಿಗ ಇತ್ಯಾದಿ (ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ತಮ್ಮ ಮೂಲ ಜಾತಿ) ದಾಖಲಿಸಬೇಕು ಎಂದು ಮನವಿ ಮಾಡಿದರು. ಛಲವಾದಿ ನೌಕರರ ಒಕ್ಕೂಟದ ರಾಜ್ಯ ಘಟಕ ಅಧ್ಯಕ್ಷ ಚಿದಾನಂದ ಕಾಂಬಳೆ ಮಾತನಾಡಿ ಬಾಬಾಸಾಹೇಬರು ನಮಗೂ ಮನುಷ್ಯರಂತೆ ಬದುಕಲು ಎಲ್ಲಾ ರೀತಿಯ ಅವಕಾಶಗಳನ್ನು ಕೊಟ್ಟು ಕೊನೆಗೆ ಬುದ್ಧ ಮಾರ್ಗ ತೋರಿದ್ದಾರೆ. ಅದಕ್ಕಾಗಿ ನಾವೆಲ್ಲರು ಅವರು ತೋರಿದ ಮಾರ್ಗದಂತೆ ಬೌದ್ಧರಾಗಬೇಕಾಗಿದೆ. ಅದಕ್ಕಾಗಿ ನಾವು ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಬೌದ್ಧ ಎಂದು ಬರೆಸಬೇಕು ಎಂದು ಮನವಿ ಮಾಡಿದರು. ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಳ್ಳಿ ಮಾತನಾಡಿ ಧರ್ಮ ‘ಬೌದ್ಧ’ ಎಂದು ಜಾತಿ ಹೊಲೆಯ ಛಲವಾದಿ ಮಾದಿಗ ಎಂದು ದಾಖಲಿಸಿದರೆ ದಲಿತರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯಗಳು ರದ್ದಾಗುವುದಿಲ್ಲ ಎಂದರು. ಮುಖಂಡರಾದ  ಪನವನಕುಮಾರ ನಿಂಬಾಳಕರ್ ಅರವಿಂದ ಲಂಬು ಸಂತೊಷ ಪಿರಗಾ ಸುಭಾಸ ಚಲವಾದಿ ಸುನೀಲ್ ಹಿಟ್ನಳ್ಳಿ ಸತೀಶ ಹಿಮ್ಕರ್  ಅಭಿಷೇಕ ಚಕ್ರವರ್ತಿ ವೆಂಕಟೇಶ್ ವಗ್ಗ್ಯಾನವರ ಸಂತೊಷ ಶಹಾಪುರ ಬಸವರಾಜ ಚಲವಾದಿ ಸುಜಾತಾ ಚಂಚಲಕರ್ ಅನ್ನಪೂರ್ಣ ಬೆಳ್ಳೆನವರ ಭಾಗ್ಯಶ್ರೀ ವಗ್ಗ್ಯಾನವರ ಸಿದ್ದಮ್ಮ ಚಲವಾದಿ ಶಿವಾನಂದ ದೊಡಮನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.