ADVERTISEMENT

ರಾಜ್ಯಕ್ಕೆ ಕೇಂದ್ರ ಸಚಿವರ ಕೊಡುಗೆ ಶೂನ್ಯ: ಸಚಿವ ಶರಣಬಸಪ್ಪಗೌಡ ದರ್ಶನಾಪುರ ಆರೋಪ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:48 IST
Last Updated 11 ಸೆಪ್ಟೆಂಬರ್ 2025, 5:48 IST
   

ಕೆಂಭಾವಿ: ‘ರಾಜ್ಯದಲ್ಲಿ ನಾಲ್ಕು ಜನ ಕೇಂದ್ರ ಸಚಿವರಿದ್ದರೂ ನಾಲ್ಕು ಪೈಸೆ ಅನುದಾನ ರಾಜ್ಯಕ್ಕೆ ತಂದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಸಮೀಪದ ಕಿರದಳ್ಳಿ ಗ್ರಾಮದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು,

‘ರಾಜ್ಯಕ್ಕೆ ಕೇಂದ್ರ ಸಚಿವರ ಕೊಡುಗೆ ಶೂನ್ಯ. ರಾಜ್ಯದಲ್ಲಿ ರೈತರು ರಸಗೊಬ್ಬರ ಕೊರತೆಯಿಂದ ಪರದಾಡುತ್ತಿದ್ದಾರೆ ಆದರೆ ಕೇಂದ್ರ ಸರ್ಕಾರ ಮಾತ್ರ ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ನನ್ನ ಮತಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ, ಶಾಲೆಗಳ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.

‘ಕಿರದಳ್ಳಿ ಗ್ರಾಮದಲ್ಲಿ ಈಗಾಗಲೆ ₹ 95ಲಕ್ಷ ವೆಚ್ಚದ ಸಿಸಿ ರಸ್ತೆ ಕೆಲಸ ಮುಗಿದಿದ್ದು, ಕಿರದಳ್ಳಿ-ನಗನೂರ 7ಕಿಮೀ ರಸ್ತೆ ಅಭಿವೃದ್ಧಿಗೆ ಪ್ರಗತಿ ಪಥ ಯೋಜನೆಯಲ್ಲಿ ಅನುಮೋದನೆಗೆ ಕಳಿಸಲಾಗಿದೆ’ ಎಂದು ಹೇಳಿದರು.

‘ಗ್ರಾಮದಲ್ಲಿರುವ ಹಳೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳ ಬದಲಾವಣೆ, ನಗರ ಪ್ರದೇಶಗಳಿಂದ ಬಸ್ ಸೌಲಭ್ಯ ಸೇರಿದಂತೆ ಗ್ರಾಮಸ್ಥರಿಂದ ಹಲವು ಬೇಡಿಕೆಗಳು ಬಂದಿದೆ. ಅವುಗಳನ್ನು ಶೀಘ್ರದಲ್ಲೆ ಈಡೇರಿಸಲಾಗುವುದು’ ಎಂದು ಹೇಳಿದರು. ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಸಚಿವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಜಿ.ಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ, ಶಹಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪೂರ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ಬಸನಗೌಡ ಚಿಂಚೋಳಿ, ಗುತ್ತಿಗೆದಾರ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ.ಬಿ, ಮಂಜುನಾಥ ದೇಸಾಯಿ, ಮಲ್ಲಣ್ಣ, ಶಿವರಾಜ ಬೂದೂರ, ಹಳ್ಳೆಪ್ಪ ಹವಾಲ್ದಾರ, ವಿರುಪಾಕ್ಷಿ ಕರಡಕಲ್, ಖಾಜಾಪಟೇಲ ಕಾಚೂರ, ಧರ್ಮಿಬಾಯಿ ರಾಠೋಡ ಸೇರಿದಂತೆ ಅನೇಕರಿದ್ದರು.

ಲಂಕೇಶ ದೇವತ್‍ಕಲ್, ಶರಣಮ್ಮ ನಿರೂಪಿಸಿದರು. ಅಮೀನರೆಡ್ಡಿ ಪಾಟೀಲ ಕಿರದಳ್ಳಿ ಸ್ವಾಗತಿಸಿದರು, ಮಲ್ಲಣ್ಣ ಹೆಗ್ಗೇರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.