ADVERTISEMENT

ಅವಳಿ ಜಿಲ್ಲೆಯ 65 ಸಾವಿರ ಎಕರೆಗೆ ನೀರು

ಚಿಕ್ಕಗಲಗಲಿ ಬ್ಯಾರೇಜ್‌ಗೆ ಎಂ.ಬಿ.ಪಾಟೀಲ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 15:24 IST
Last Updated 23 ಜೂನ್ 2021, 15:24 IST
ತುಂಬಿ ಹರಿಯುತ್ತಿರುವ ಚಿಕ್ಕಗಲಗಲಿ ಬ್ಯಾರೇಜ್‌ನ ಮನಮೋಹಕ ನೋಟ
ತುಂಬಿ ಹರಿಯುತ್ತಿರುವ ಚಿಕ್ಕಗಲಗಲಿ ಬ್ಯಾರೇಜ್‌ನ ಮನಮೋಹಕ ನೋಟ   

ವಿಜಯಪುರ: ಶಾಸಕ, ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಮುತುವರ್ಜಿಯಿಂದಗಲಗಲಿ ಬ್ಯಾರೇಜಿನ ಎತ್ತರ ಹೆಚ್ಚಿಸಿರುವ ಪರಿಣಾಮ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯ 65 ಸಾವಿರ ಎಕರೆಗೂ ಅಧಿಕ ಭೂಮಿಗೆ ನೀರು ಲಭಿಸಲಿದೆ.

ಗಲಗಲಿ ಬ್ಯಾರೇಜ್‌ನಿಂದ ಚಿಕ್ಕಪಡಸಲಗಿ ವರೆಗೆ 1.5 ಟಿಎಂಸಿ ಅಡಿ ನೀರುಸಂಗ್ರಹವಾಗಲಿದ್ದು, ಇದರಿಂದ ಈ ಭಾಗದ ಜನರು ಬೇಸಿಗೆಯಲ್ಲಿ ಅನುಭವಿಸುತ್ತಿರುವ ಬೆಳೆಹಾನಿಯಂತಹ ತೊಂದರೆಗಳು ನಿವಾರಣೆಯಾಗಲಿದೆ.

ವಿಜಯಪುರ ತಾಲ್ಲೂಕಿನ ಚಿಕ್ಕಗಲಗಲಿ, ಶಿರಬೂರ, ಕಣಬೂರ, ಬಬಲಾದಿ, ಕೆಂಗಲಗುತ್ತಿ, ಗುಣದಾಳ, ಜಮಖಂಡಿ ತಾಲ್ಲೂಕಿನ ಚಿನಗುಂಡಿ, ಜಕನೂರ, ಜನವಾಡ, ಕೌಟಗೇರಿ, ಬಿದರಿ, ಚಿಕ್ಕಪಡಸಲಗಿ, ಕಂಚನೂರ ಹಾಗೂ ಬೀಳಗಿ ತಾಲ್ಲೂಕಿನ ಗಲಗಲಿ, ರಬಕವಿ, ಚೌಡಾಪುರ, ಕೊಲೂರ, ಮುಂದಗನೂರ ಗ್ರಾಮಗಳ ವ್ಯಾಪ್ತಿಯ ಸಾವಿರಾರು ರೈತರ ಭೂಮಿಗೆ ಬೇಸಿಗೆಯಲ್ಲೂ ಅನುಕೂಲವಾಗಲಿದೆ.

ADVERTISEMENT

1980ರಲ್ಲಿ ಗಲಗಲಿ ಮತ್ತು ಚಿಕ್ಕಗಲಗಲಿ ನಡುವೆ ಸಂಪರ್ಕಕ್ಕಾಗಿ ಸೇತುವೆ ಮತ್ತು ನೀರಿನ ಸಂಗ್ರಹಕ್ಕಾಗಿ 0.6 ಟಿಎಂಸಿ ಅಡಿ ಸಾಮರ್ಥ್ಯದ ಬ್ಯಾರೇಜ್ ನಿರ್ಮಿಸಲಾಗಿತ್ತು. ಇದರಿಂದಾಗಿ ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಲಭ್ಯತೆಯಿಂದ ಸುಸ್ಥಿರ ವ್ಯವಸಾಯ ಸಾಧ್ಯವಾಯಿತು. ಕಾಲಾನುಕ್ರಮದಲ್ಲಿ ನೀರಿನ ಮೂಲದಿಂದಾಗುವ ನೀರಾವರಿ ಪ್ರದೇಶ ಹೆಚ್ಚುತ್ತಾ ಹೋದದ್ದರಿಂದ ಗಲಗಲಿ ಬ್ಯಾರೇಜಿನ ನೀರಿನ ಸಂಗ್ರಹ ಸಾಲದಾಯಿತು.

ಪ್ರತಿ ಬೇಸಿಗೆಯಲ್ಲಿ ನೀರು ಖಾಲಿಯಾಗಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಪೂರ್ತಿ ಒಣಗಿ ಹೋಗಿ ರೈತರಿಗೆ ಅಪಾರ ಹಾನಿ ಉಂಟಾಗುತ್ತಿತ್ತು. ಇದರಿಂದಾಗಿ ಸಕ್ಕರೆ ಕಾರ್ಖಾನೆಗಳಿಗೂ ಕಬ್ಬಿನ ಕೊರತೆ, ಗುಣಮಟ್ಟದಲ್ಲಿನ ಕುಸಿತದಿಂದಾಗಿ ಕಾರ್ಖಾನೆಗಳಿಗೂ ಹಾನಿಯುಂಟಾಗುತ್ತಿತ್ತು.

ಬ್ಯಾರೇಜಿನ ನೀರು ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸುವ ಕುರಿತು ವಿಚಾರಿಸಿದಾಗ ಆಲಮಟ್ಟಿ ಆಣೆಕಟ್ಟೆಯ ಹಿನ್ನೀರು ಹಿಪ್ಪರಗಿ ಬ್ಯಾರೇಜ್‌ವರೆಗೆ ನಿಲ್ಲುವುದರಿಂದ ಎತ್ತರಿಸುವುದು ತಾಂತ್ರಿಕವಾಗಿ ಅಸಾಧ್ಯವಾಯಿತು.

2013ರಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದ ಎಂ.ಬಿ.ಪಾಟೀಲ ಅವರು, ಈ ಭಾಗದ ರೈತರ ಬೇಡಿಕೆ ಪರಿಗಣಿಸಿ ₹ 54 ಕೋಟಿ ವೆಚ್ಚದ ಕಾಮಗಾರಿಗೆ ಅನುಮತಿ ನೀಡಿ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಮಳೆಗಾಲದಲ್ಲಿ ಆಲಮಟ್ಟಿ ಆಣೆಕಟ್ಟೆಯ ಹಿನ್ನೀರು ನಿಲ್ಲುವುದರಿಂದ ನಿರ್ಮಾಣ ಕಾರ್ಯ ಸಾಧ್ಯವಾಗದೇ ಕೇವಲ ಬೇಸಿಗೆಯಲ್ಲಿ ಮಾತ್ರ ಈ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ನಡುವೆಯೂ ಗಲಗಲಿ ಬ್ಯಾರೇಜಿನ ಎತ್ತರ ಹೆಚ್ಚಿಸಲಾಗಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.