
ಆಲಮಟ್ಟಿ: ಆಲಮಟ್ಟಿ ಜಲಾಶಯದ ಭದ್ರತೆಗೆ ನಿಯೋಜಿಸಿದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ ಐಎಸ್ ಎಫ್) ಕಾರ್ಯವೈಖರಿ ಹಾಗೂ ಭದ್ರತೆಯ ಬಗ್ಗೆ ಧಾರವಾಡ ಮೂರನೇ ಪಡೆಯ ಕಮಾಂಡೆಂಟ್ ಗುರುನಾಥ ಮಂಗಳವಾರ ಪರಿಶೀಲನೆ ನಡೆಸಿದರು.
ಆಲಮಟ್ಟಿ ಜಲಾಶಯ, ಪ್ರವೇಶ ದ್ವಾರ, ನಾನಾ ಕಡೆ ನಿಗದಿಗೊಳಿಸಿರುವ ಪೊಲೀಸ್ ಚೆಕ್ ಪೋಸ್ಟ್, ಚೆಕ್ ಪಾಯಿಂಟ್‌ಗಳನ್ನು ಪರಿಶೀಲಿಸಿದರು. ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿಯಿಂದ ಪ್ರವೇಶಿಸುವ ಪ್ರತಿ ವಾಹನಗಳ ಸಂಖ್ಯೆಯನ್ನು ಡೈರಿಯಲ್ಲಿ ನಮೂದಿಸಬೇಕು, ವಾಹನಗಳ ಡಿಕ್ಕಿ ತೆಗೆದು ಪರಿಶೀಲಿಸಬೇಕು, ಸಾರ್ವಜನಿಕರೊಂದಿಗೆ ಸೌಮ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು.
ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಡಿ. ಬಸವರಾಜ ಅವರೊಂದಿಗೆ ಚರ್ಚಿಸಿದ ಗುರುನಾಥ, ಭದ್ರತೆ ಕಟ್ಟುನಿಟ್ಟುಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಸದ್ಯ ಆಲಮಟ್ಟಿ ಜಲಾಶಯದ ಹಿಂಭಾಗದಲ್ಲಿ ಬೋಟ್ ಇದೆ. ಜಲಾಶಯದ ಮುಂಭಾಗದಲ್ಲಿಯೂ ಒಂದು ಬೋಟ್ ವ್ಯವಸ್ಥೆ ಮಾಡಲು ತಿಳಿಸಿದರು. ಬೋಟ್ ನೀಡಿದರೆ ಜಲಾಶಯದ ನಿಷೇಧಿತ ಸ್ಥಳಗಳಲ್ಲಿ ಮೀನುಗಾರಿಕೆ ಸೇರಿದಂತೆ ನಾನಾ ಕ್ರಮಗಳನ್ನು ತಡೆಗಟ್ಟಲು ಸಹಾಯವಾಗಲಿದೆ ಎಂದರು. ಇನ್ನೊಂದು ಬೋಟ್ ಒದಗಿಸುವ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿ.ಬಸವರಾಜ ನೀಡಿದರು.
ನಿಷೇಧಿತ ಸ್ಥಳಗಳಲ್ಲಿ ಮೀನುಗಾರಿಕೆ ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು. ಅಸಿಸ್ಟೆಂಟ್ ಕಮಾಂಡೆಂಟ್ ಈರಪ್ಪ ವಾಲಿ, ಆಲಮಟ್ಟಿ ಜಲಾಶಯದ ಭದ್ರತಾ ಉಸ್ತುವಾರಿ ಶಿವಲಿಂಗ ಕುರೆನ್ನವರ, ಇನ್ಸ್ ಪೆಕ್ಟರ್ ಅಹ್ಮದ್ ಸಂಗಾಪುರ, ಪಿಎಸ್ ಐ ಪ್ರಶಾಂತ ಸಜ್ಜನ, ಸುಧಾರಾಣಿ ಬಿರಾದಾರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.