ADVERTISEMENT

2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ: ಸಿದ್ದರಾಮಯ್ಯ

ಬಳಗನೂರು, ಚಾಂದಕವಠೆ, ತಾಂಬಾದಲ್ಲಿ ಕಾಂಗ್ರೆಸ್‌ ಅಬ್ಬರದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 15:29 IST
Last Updated 19 ಅಕ್ಟೋಬರ್ 2021, 15:29 IST
ಸಿಂದಗಿ ತಾಲ್ಲೂಕಿನ ಬಳಗಾನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದರು–ಪ್ರಜಾವಾಣಿ ಚಿತ್ರ
ಸಿಂದಗಿ ತಾಲ್ಲೂಕಿನ ಬಳಗಾನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: 2023ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸಿಂದಗಿ ತಾಲ್ಲೂಕಿನ ಬಳಗಾನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ದಮ್ಮಯ್ಯ ಎನ್ನುತ್ತೇನೆ ಈ ಭ್ರಷ್ಟ, ಸುಳ್ಳುಗಾರ, ಕೊಲೆಗಡುಕ ಬಿಜೆಪಿ ಸರ್ಕಾರವನ್ನು ಮೊದಲು ಕಿತ್ತು ಹಾಕಿ ಎಂದು ಮತದಾರರಿಗೆ ಮನವಿ ಮಾಡಿದರು.

ಅ.30ರಂದು ನಡೆಯುವ ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದರು.

ADVERTISEMENT

ಬಿಜೆಪಿ ಸರ್ಕಾರ ಬಡವರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಮಹಿಳೆಯರು, ಕಾರ್ಮಿಕರು, ರೈತರು ಸೇರಿದಂತೆ ಎಲ್ಲ ವರ್ಗದವರ ವಿರೋಧಿ. ಇವರು ಅಧಿಕಾರಕ್ಕೆ ಬಂದ ಬಳಿಕ ಯಾರೂ ನೆಮ್ಮದಿಯಿಂದ ಇಲ್ಲ ಎಂದು

ಬಿಜೆಪಿ ಸರ್ಕಾರ ಕಾರ್ಪೊರೇಟ್‌, ಬಂಡವಾಳಶಾಹಿಗಳ ಪರವಾದ ಸರ್ಕಾರ. ಅದಾನಿ,ಅಂಬಾನಿ ಅವರ ಆದಾಯ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ, ಬಡವರು, ರೈತರ ಆದಾಯ ನಾಲ್ಕು ಪಟ್ಟು ಕಡಿಮೆಯಾಗಿದೆ ಎಂದು ಆರೋಪಿಸಿದರು.

ಮೋದಿ ಕಣ್ಣು ತೆರೆಯಿಸಿ:

ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಮ್ಮ ಗೆಲುವಿಗೆ ಅಡ್ಡಗಾಲು ಇಡುವ ಪ್ರಯತ್ನಗಳು ನಡೆದಿವೆ. ಆದರೆ, ಸಿಂದಗಿಯಲ್ಲಿ ಕಾಂಗ್ರೆಸ್‌ ಗೆದ್ದರೆ ದೇಶಕ್ಕೆ ಹೊಸ ಸಂದೇಶ ರವಾನೆಯಾಗಲಿದೆ. ಆರ್‌ಎಸ್‌ಎಸ್‌ ಶಕ್ತಿ ಕಡಿಮೆಯಾಗಲಿದೆ. ಮೋದಿ ಕಣ್ಣು ತೆರೆಯುತ್ತಾರೆ ಎಂದು ಹೇಳಿದರು.

70 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್‌ ಸರ್ಕಾರ ಸ್ಥಾಪಿಸಿದ ಕಟ್ಟಿಬೆಳೆಸಿದ ಆಸ್ತಿಗಳನ್ನು ಮೋದಿ ಮಾರಾಟ ಮಾಡುವಲ್ಲಿ ನಿರತವಾಗಿದ್ದಾರೆ. ಆದರೂ ಕಾಂಗ್ರೆಸ್‌ ಏನೂ ಮಾಡಿಲ್ಲ ಎನ್ನುತ್ತಾರೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಈ ಬಾರಿ ತೊಗರಿ ಬಂಪರ್‌ ಬೆಳೆ ಬಂದಿದ್ದು, ರೈತರಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ. ಆದರೆ, ಕೇಂದ್ರ ಸರ್ಕಾರ ವಿದೇಶಗಳಿಂದ ತೊಗರಿಯನ್ನು ಮುಕ್ತವಾಗಿ ಆಮದು ಮಾಡಿಕೊಳ್ಳಲು ಮುಂದಾಗುವ ಮೂಲಕ ಬೆಲೆ ತಗ್ಗಿಸಿ ರೈತರಿಗೆ ನಷ್ಠ ಅನುಭವಿಸುವಂತೆ ಮಾಡಿದೆ ಎಂದರು.

ಪಂಜಾಬ್‌ನಲ್ಲಿ ಪ್ರತಿ ಟನ್‌ ಕಬ್ಬಿಗೆ ರೂ 3600 ಇದೆ. ಆದರೆ, ಕರ್ನಾಟಕದಲ್ಲಿ ಕೇವಲ ರೂ 2300 ಇದೆ. ರಾಜ್ಯದ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲ ವರ್ಗದವರೂ ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾವು ಜಾತಿ, ಧರ್ಮವನ್ನು ಬಿಟ್ಟು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ ಎಂದರು.

ದೇಶದಲ್ಲಿ ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಸರ್ಕಾರಿ ಉದ್ಯೋಗವಲ್ಲದಿದ್ದರೂ ಖಾಸಗಿ ಉದ್ಯೋಗವನ್ನಾದರೂ ನೀಡಬೇಕಿತ್ತು. ಆದರೆ, ಬಿಜೆಪಿ ಅಧಿಕಾರದ ಅವಧಿಯಲ್ಲಿ ಇರುವ ಉದ್ಯೋಗವೂ ಕಳೆದುಕೊಳ್ಳುವಂತಾಗಿದೆ ಎಂದರು.

ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರ ತಾಂಡವವಾಡಿತು. ಬೆಡ್‌ನಿಂದ ಔಷಧಿವರೆಗೂ ಎಲ್ಲ ಹಂತದಲ್ಲೂ ಲಂಚ ಹೊಡೆದರು. ವೆಂಟಿಲೇಟರ್ ನಿಂದ ಹಿಡಿದು ಮಾಸ್ಕ್ ವರೆಗೂ ಎಲ್ಲದರಲ್ಲೂ ಭ್ರಷ್ಟಾಚಾರ. ಇದನ್ನು ಬಯಲು ಮಾಡಿದರೂ ಅವರು ಮಾನಮರ್ಯಾದೆ ಇಲ್ಲದೆ ಅಧಿಕಾರದಲ್ಲಿ ಕೂತಿದ್ದಾರೆ. ಆಸ್ಪತ್ರೆ ಸೇರಲು, ಔಷಧಿ ಪಡೆಯಲು, ಆಕ್ಸಿಜನ್ ಗಾಗಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಬಂತು. ಕೊನೆಗೆ ಸತ್ತವರನ್ನು ಅಂತ್ಯಸಂಸ್ಕಾರ ಮಾಡಲೂ ಕ್ಯೂ ನಿಲ್ಲಬೇಕಾಯಿತು ಎಂದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ಎಂ‌.ಬಿ. ಪಾಟೀಲ್, ಎಚ್.ಎಂ. ರೇವಣ್ಣ, ನರೇಂದ್ರಸ್ವಾಮಿ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಧೃವನಾರಾಯಣ್, ವಿಧಾನಸಭೆ ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್, ಶಾಸಕರಾದ ಎಂ.ವೈ. ಪಾಟೀಲ್, ಯಶವಂತರಾಯಗೌಡ ಪಾಟೀಲ್, ಶಿವಾನಂದ ಪಾಟೀಲ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ಶರಣಬಸಪ್ಪ ಸುಣ್ಣಗಾರ್, ಎಸ್. ರವಿ, ಸುನೀಲ್‌ ಗೌಡ ಪಾಟೀಲ ಇದ್ದರು.

****

ಬಿಜೆಪಿಯ ದುರಾಡಳಿತದಿಂದ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಿದೆ

ರಣದೀಪ್ ಸಿಂಗ್ ಸುರ್ಜೇವಾಲ,ಎಐಸಿಸಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.