ADVERTISEMENT

ಸಿಂದಗಿ ಮುಖ್ಯಾಧಿಕಾರಿ ವರ್ಗಾವಣೆಗೆ ಷಡ್ಯಂತ್ರ!

ಸಾಮಾನ್ಯ ಸಭೆ ಕರೆಯುವಂತೆ ಅಧ್ಯಕ್ಷರಿಗೆ 10 ಸದಸ್ಯರ ಮನವಿ

ಶಾಂತೂ ಹಿರೇಮಠ
Published 20 ಡಿಸೆಂಬರ್ 2022, 0:30 IST
Last Updated 20 ಡಿಸೆಂಬರ್ 2022, 0:30 IST
ಸಿಂದಗಿ ಪುರಸಭೆ ಕಾರ್ಯಾಲಯ
ಸಿಂದಗಿ ಪುರಸಭೆ ಕಾರ್ಯಾಲಯ   

ಸಿಂದಗಿ: ಪುರಸಭೆಯ 10 ಜನ ಸದಸ್ಯರು ಮುಖ್ಯಾಧಿಕಾರಿ ಕಾರ್ಯ ವೈಖರಿ ಸರಿ ಇಲ್ಲ. ಸದಸ್ಯರ ಗಮನಕ್ಕೆ ತಾರದೇ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಅವರನ್ನು ವರ್ಗಾವಣೆಗೊಳಿಸುವ ಕಾರಣಕ್ಕಾಗಿಯೇ ಒಂದಂಶದ ಸಾಮಾನ್ಯ ಸಭೆ ಕರೆಯುವಂತೆ ಅಧ್ಯಕ್ಷರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.

ಅಭಿವೃದ್ದಿಗಾಗಿ ತಿಂಗಳಿಗೊಂದು ಸಾಮಾನ್ಯ ಸಭೆ ನಡೆಯದಿದ್ದರೂ ಮುಖ್ಯಾಧಿಕಾರಿ ವರ್ಗಾವಣೆಗಾಗಿಯೇ ಸಾಮಾನ್ಯ ಸಭೆ ನಡೆಸುವಂತೆ ಒತ್ತಾಯಿಸುವ ಸದಸ್ಯರ ಇಂಗಿತಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ಕೇಳಿ ಬರುತ್ತಿದೆ.

ಆಗದ ಕಾಮಗಾರಿಯ ಬಿಲ್ ತೆಗೆಯುವಂತೆ ಒತ್ತಾಯಿಸುವುದು ಇಲ್ಲಿಯ ಪುರಸಭೆಯಲ್ಲಿ ಸಾಗಿ ಬಂದ ಸಾಮಾನ್ಯ ವಿಷಯ. ಆದರೆ, ಈಗ ಬೋಗಸ್ ಬಿಲ್ ತೆಗೆಯಲು ಆಸ್ಪದ ಇಲ್ಲದ ಕಾರಣಕ್ಕಾಗಿ ಮುಖ್ಯಾಧಿಕಾರಿ ವರ್ಗಾವಣೆಗೆ ಕೆಲವು ಸದಸ್ಯರು ಒತ್ತಾಯಿಸುತ್ತಿದ್ದಾರೆ.

ADVERTISEMENT

ವಿವಿಧ ಯೋಜನೆಗಳ ಕ್ರಿಯಾ ಯೋಜನೆ ಆಗದೇ ವರ್ಷದಿಂದಲೂ ಅಗತ್ಯ ಕೆಲಸಗಳೆಲ್ಲ ಸ್ಥಗಿತಗೊಂಡಿದ್ದರಿಂದ ಮುಖ್ಯಾಧಿಕಾರಿ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಾಧಿಕಾರಿ ವರ್ಗಾವಣೆಗೆ ಸಹಿ ಹಾಕಿದ 10 ಜನ ಸದಸ್ಯರಲ್ಲಿ ಒಬ್ಬರಾದ ಭಾಷಾಸಾಬ ತಾಂಬೋಳಿ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರದೋ ಒತ್ತಾಯಕ್ಕೆ ಸಹಿ ಹಾಕಿರುವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಖ್ಯಾಧಿಕಾರಿ ಆಡಳಿತ ಕರ್ತವ್ಯ ಇಲ್ಲಿಯ ಪುರಸಭೆಗೆ ಇನ್ನೂ ಅಗತ್ಯವಾಗಿದೆ ಎಂದು ಹಿರಿಯ ಸದಸ್ಯ ಹಣಮಂತ ಸುಣಗಾರ ಮುಖ್ಯಾಧಿಕಾರಿಯನ್ನು ಬೆಂಬಲಿಸಿದ್ದಾರೆ.

ಎರಡು ವರ್ಷದ ಅವಧಿಯಲ್ಲಿ ಎರಡು ಸಾಮಾನ್ಯ ಸಭೆಗಳು ಮಾತ್ರ ನಡೆದಿವೆ. ತಿಂಗಳಿಗೊಂದು ಸಾಮಾನ್ಯ ಸಭೆ ನಡೆಸಿದರೆ ಮಾತ್ರ ಅಭಿವೃದ್ದಿ ಕೆಲಸ ನಡೆಯುವುದು ಸಾಧ್ಯ.ಆದರೆ, ಸದಸ್ಯ-ಸದಸ್ಯರ ಮಧ್ಯೆ ಹೊಂದಾಣಿಕೆ ಇಲ್ಲ. ಅಧ್ಯಕ್ಷ-ಸದಸ್ಯರ ಮಧ್ಯೆಯೂ ಇಲ್ಲದ ಸಹಕಾರ. ಹೀಗಾಗಿ ಪಟ್ಟಣದ ಸ್ಥಿತಿ ಅಯೋಮಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.