ಆಲಮೇಲ: ಪುರಸಭೆ ಮುಖ್ಯಾಧಿಕಾರಿ ನಡೆ ಖಂಡಿಸಿ ಪಟ್ಟಣ ಪಂಚಾಯಿತಿ ಎದುರು ತಳವಾರ ಸಮಾಜದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ವಾರ್ಡ್ ನಂ. 6ರಲ್ಲಿನ ಅಂಬಿಗರ ಚೌಡಯ್ಯ ದೇವಸ್ಥಾನ ಪಕ್ಕ ಕರ್ನಾಟಕ ರಾಜ್ಯ ತಳವಾರ ಮಹಾಸಭೆ ಸಮಿತಿ ಪದಾಧಿಕಾರಿಗಳು ಗೋಡೆ ನಿರ್ಮಿಸುತ್ತಿರುವ ವೇಳೆ ಪ.ಪಂ ಮುಖ್ಯಾಧಿಕಾರಿ ಸುರೇಶ ನಾಯಕ ಕಾಮಗಾರಿ ತಡೆದರು. ಇದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಸ್ಥಳಕ್ಕೆ ಪಿಎಸ್‌ಐ ಅರವಿಂದ ಭೇಟಿ ನೀಡಿ ಮುಖಂಡರೊಂದಿಗೆ ಚರ್ಚೆ ನಡೆಸಿದ ವೇಳೆ ವಾಗ್ವಾದವೂ ನಡೆಯಿತು. ಬಳಿಕ ಪದಾಧಿಕಾರಿಗಳು ಅಲ್ಲಿಂದ ಪಟ್ಟಣ ಪಂಚಾಯಿತಿ ಕಚೇರಿಗೆ ತೆರಳಿ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಂಬಿಗರ ಚೌಡಯ್ಯನವರ ದೇವಸ್ಥಾನ ಅಂದಾಜು 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಪಕ್ಕದಲೇ ಐತಿಹಾಸಿಕ ದೇವರ ಬಾವಿಯೂ ಇದೆ. ಕೆಲವರು ರಾಜಕೀಯ ಪ್ರಭಾವದಿಂದ ಈ ಬಾವಿ ಮುಚ್ಚುವ ಹುನ್ನಾರ ನಡೆಸಿದ್ದಾರಲ್ಲದೆ, ಪಕ್ಕದಲ್ಲೇ ಶೌಚಗೃಹ ನಿರ್ಮಿಸುತ್ತಿದ್ದಾರೆ. ಆದರೂ ಪ.ಪಂ ಮುಖ್ಯಾಧಿಕಾರಿಗಳು ಕೇವಲ ರಾಜಕೀಯ ಪ್ರಭಾವಿಗಳ ಪರ ಕೆಲಸ ಮಾಡುತ್ತಿದ್ದಾರೆ.
ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಬಿಗರ ಚೌಡಯ್ಯನವರ ದೇವಸ್ಥಾನ ಜಾಗ ಅಳತೆ ಮಾಡಿ ಹದ್ದಬಸ್ತ್ ಮಾಡಿಕೊಡಬೇಕು. ಪಟ್ಟಣದಲ್ಲಿ ಪಂಚಾಯಿತಿ ಜಾಗಗಳನ್ನು ಅತಿಕ್ರಮಿಸಿಕೊಂಡು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ದೇವರ ಬಾವಿ ಜೀರ್ಣೋದ್ಧಾರಗೊಳಿಸಬೇಕು. ಶೌಚಗೃಹ ನಿರ್ಮಾಣ ಕಾಮಗಾರಿ ಕೈ ಬಿಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎಂದು ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಪ.ಪಂ ಮುಖ್ಯಾಧಿಕಾರ ಸುರೇಶ ನಾಯಕ ಮಾತನಾಡಿ, ಈ ವಿಷಯ ಕುರಿತು ಮೇಲಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು. ಅದಕ್ಕಾಗಿ ಮೂರು ದಿನಗಳ ಕಾಲಾವಕಾಶ ಕೇಳಿದಾಗ ಇದಕ್ಕೆ ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.