ಚಡಚಣ: ಆಧುನಿಕ ಜೀವನ ಪದ್ಧತಿ ಹಾಗೂ ಕ್ರೀಡೆಗಳ ಭರಾಟೆಯಲ್ಲಿ ಶುದ್ಧ ದೇಶಿಯ ಕ್ರೀಡೆಗಳು ಮರೆಯಾಗುತ್ತಿವೆ. ದೇಸಿ ಕ್ರೀಡೆಗಳಾದ ಕೊಕ್ಕೊ ಕಬಡ್ಡಿ, ಲಗೋರಿ, ಕುಸ್ತಿಗಳಂತಹ ಕ್ರೀಡೆಗಳು ನಮ್ಮಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಕುಸ್ತಿಯಂಥ ಪಂದ್ಯಾಟಗಳನ್ನು ಏರ್ಪಡಿಸಿ,ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನವಾಗಿ ಇಲ್ಲಿನ ಪಟ್ಟಣ ಪಂಚಾಯ್ತಿ ಸದಸ್ಯರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಅಂದಾಜು ₹5 ಲಕ್ಷ ವೆಚ್ಚದಲ್ಲಿ ಕುಸ್ತಿ ಮೈದಾನ ನಿರ್ಮಾಣ ಮಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ವತ: ಕುಸ್ತಿ ಪಟುವೂ ಆಗಿರುವ ಪಟ್ಟಣ ಪಂಚಾಯ್ತಿ ಸದಸ್ಯ ಶ್ರೀಕಾಂತ ಗಂಟಗಲ್ಲಿ, ಕುಸ್ತಿ ಪಂದ್ಯ ಆಯುಧಗಳನ್ನು ಉಪಯೋಗಿಸದೆ ಎದುರಾಳಿಯೊಂದಿಗೆ ಸೆಣೆಸಿ ಗೆಲ್ಲುವ ಪಂದ್ಯಾಟ. ಇದರಲ್ಲಿ ವ್ಯಕ್ತಿಯ ಶಕ್ತಿ ಹಾಗೂ ಯುಕ್ತಿಗಳು ಪ್ರದರ್ಶಿತವಾಗುತ್ತವೆ. ಭಾರತದಲ್ಲಿ ಕುಸ್ತಿ ಅದರ ಲಿಖಿತ ಚರಿತ್ರೆಗಿಂತ ಪುರಾತನವಾದುದ್ದು. ನಮ್ಮ ಪುರಾಣಕಥೆಗಳಲ್ಲಿ ಅನೇಕ ಕುಸ್ತಿ ಪ್ರಸಂಗಗಳಿವೆ. ಇಂತಹ ಪ್ರಾಚೀನ ಕ್ರೀಡೆಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎನ್ನುತ್ತಾರೆ ಅವರು.
ಗ್ರಾಮೀಣ ಭಾಗದಲ್ಲಿ ಸಹಸ್ರಾರು ಕುಸ್ತಿಪಟುಗಳಿದ್ದಾರೆ. ಅವರೆಲ್ಲರಿಗೂ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಅದಕ್ಕಾಗಿ ಹೊಸ ಗರಡಿಮನೆ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕರಿಸಿದರೆ ಕೆಲವೇ ದಿನಗಳಲ್ಲಿ ಗರಡಿಮನೆ ಸಿದ್ಧಪಡಿಸಿಕೊಡುವೆ ಎನ್ನುತ್ತಾರೆ ಅವರು.
ಸ್ಥಳಿಯ ಸಂಗಮೇಶ್ವರ ದೇವಾಲಯದ ಮುಂಭಾಗದ ವಿಶಾಲವಾದ ಆವರಣದಲ್ಲಿ ಸುಸಜ್ಜಿತವಾದ ಕುಸ್ತಿ ಮೈದಾನ ನಿರ್ಮಿಸಲಾಗಿದೆ. ಸುಮಾರು 55 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮೈದಾನದಲ್ಲಿ ಸಾವಿರಾರು ಜನರು ಕುಳಿತು ಪಂದ್ಯಾವಳಿ ವೀಕ್ಷಿಸಬಹುದಾಗಿದೆ. ಈ ಮೈದಾನದಲ್ಲಿ ಹಲವಾರು ದೇಸಿ ಕ್ರೀಡೆಗಳನ್ನು ಆಯೋಜಿಸಬಹುದು.
ಇದೆ ತಿಂಗಳಿನ ಕೊನೆಯವಾರದಲ್ಲಿ ಆರಂಭಗೊಳ್ಳಲಿರುವ ಸಂಗಮೇಶ್ವರ ಜಾತ್ರೆಯಲ್ಲಿ ಜರುಗುವ ಕುಸ್ತಿ ಪಂದ್ಯಾವಳಿಗೆ ಈ ಮೈದಾನ ವಿಶೇಷ ಮೆರುಗು ನೀಡಲಿದೆ.
ನಮ್ಮ ದೇಸಿ ಕ್ರೀಡೆಯಾದ ಕುಸ್ತಿಯನ್ನು ಉತ್ತೇಜಿಸುವ ಸಲುವಾಗಿ ಈ ಭಾಗದಲ್ಲಿ ಕುಸ್ತಿ ಗರಡಿ ಮನೆ ಸ್ಥಾಪಿಸುವ ಇಚ್ಛೆ ಇದೆ–ಶ್ರೀಕಾಂತ ಗಂಟಗಲ್ಲಿ ಕುಸ್ತಿ ಪಟು ಪ.ಪಂ.ಸದಸ್ಯ ಚಡಚಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.