ADVERTISEMENT

ಊರ ಸೇರುವ ತವಕದಲಿ ದಿನದೂಡುತ್ತಿರುವ ನಿರಾಶ್ರಿತರು

ಲಾಕ್‌ಡೌನ್‌ನಿಂದ ಕಾಕಾ ಕಾರಕಾನೀಸ್‌ ಸಮುದಾಯ ಭವನದಲ್ಲಿ ಆಶ್ರಯ ಪಡೆದವರ ಕಣ್ಣೀರು

ಬಸವರಾಜ ಸಂಪಳ್ಳಿ
Published 7 ಏಪ್ರಿಲ್ 2020, 3:48 IST
Last Updated 7 ಏಪ್ರಿಲ್ 2020, 3:48 IST
ವಿಜಯಪುರದ ಕಾಕಾ ಕಾರಕಾನೀಸ್‌ ಸಮುದಾಯ ಭವನದಲ್ಲಿ ಆಶ್ರಯ ಪಡೆದಿರುವ ಜನ
ವಿಜಯಪುರದ ಕಾಕಾ ಕಾರಕಾನೀಸ್‌ ಸಮುದಾಯ ಭವನದಲ್ಲಿ ಆಶ್ರಯ ಪಡೆದಿರುವ ಜನ   

ವಿಜಯಪುರ: ಕೊರೊನಾ ಲಾಕ್‌ಡೌನ್‌ನಿಂದಾಗಿ ಇಲ್ಲಿನ ಮಹಾನಗರ ಪಾಲಿಕೆಯ ಕಾಕಾ ಕಾರಕಾನೀಸ್‌ ಸಮುದಾಯ ಭವನದಲ್ಲಿ ಆಶ್ರಯ ಪಡೆದಿರುವ ರಾಜ್ಯ, ಹೊರರಾಜ್ಯದ ಹತ್ತಾರು ಜನರು ದೂರದ ತಮ್ಮ ಊರುಗಳಿಗೆ ಸೇರುವ ತವಕದಲ್ಲಿ ದಿನದೂಡುತ್ತಿದ್ದಾರೆ.

ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಬೆಂಗಳೂರು, ಸೊಲ್ಲಾಪುರ, ಬಾಗಲಕೋಟೆ ಮತ್ತು ಜಿಲ್ಲೆಯ ಸಿಂದಗಿ, ಇಂಡಿಯ 46 ಜನರಿಗೆ ಜಿಲ್ಲಾಡಳಿತ ಆಶ್ರಯ ನೀಡಿದೆ.

ನಿರಾಶ್ರಿತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಕಲ್ಪಿಸಿದೆ. ಅಲ್ಲದೇ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸ್ಯಾನಿಟೈಜರ್‌, ಮಾಸ್ಕ್‌ ನೀಡಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹೊಸ ಬೆಡ್‌, ಹೊದಿಕೆ, ಟೂಥ್‌ಪೇಸ್ಟ್‌, ಸೋಪ್‌ ಸೇರಿದಂತೆ ನಿತ್ಯ ಬಳಕೆಯ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ. ಯಾವುದಕ್ಕೂ ಕೊರತೆ ಇಲ್ಲ. ಆದರೂ ಎಲ್ಲರ ಮುಖದಲ್ಲಿ ಆತಂಕ, ಭಯ ಏನನ್ನೋ ಕಳೆದುಕೊಂಡು ಅನಾಥರಾಗಿರುವ ಭಾವನೆ ಎದ್ದುಕಾಣುತ್ತಿದೆ.

ADVERTISEMENT

‘ದಮ್ಮಯ್ಯಾ, ಏನಾದರೂ ಮಾಡಿ ನಮ್ಮ ಊರಿಗೆ ನಮ್ಮನ್ನು ತಲುಪಿಸಿ ಪುಣ್ಯ ಕಟ್ಟಿಕೊಳ್ಳಿ. ಮನೆ ಬಿಟ್ಟು ಬಂದು ಒಂದು ವರ್ಷವಾಯಿತು. ಮೊದಲು ಮನೆಯವರನ್ನು ನೋಡಬೇಕು. ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಉಡುಪಿ, ಮಂಗಳೂರಿಗೆ ತೆರಳಲಾಗದೇ ಇಲ್ಲಿ ಆಶ್ರಯ ಪಡೆದವರುವ ಜನ ಅಂಗಲಾಚುತ್ತಿದ್ದಾರೆ.

‘ಯಾವುದೇ ಕಾರಣಕ್ಕೂ ನಮ್ಮ ಹೆಸರು, ಊರನ್ನು ಪತ್ರಿಕೆಗಳಲ್ಲಿ ಹಾಕಬೇಡಿ. ನಮ್ಮ ಅವಸ್ಥೆ ಬಗ್ಗೆ ಊರಿನವರಿಗೆ ತಿಳಿದರೆ ಮರ್ಯಾದೆ ಹೋಗುತ್ತದೆ. ನಾವು ಊರಿಗೆ ಹೋದರೆ ನಮ್ಮನ್ನು ಜನ ನೋಡುವ ದೃಷ್ಟಿಯೇ ಬದಲಾಗುತ್ತದೆ’ ಎಂದು ಮನವಿ ಮಾಡಿದರು.

‘ನಮ್ಮನ್ನು ಇಲ್ಲಿ ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಊಟಕ್ಕೆ, ನಿದ್ರೆಗೆ ಕೊರತೆ ಇಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಇಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಭಯವಾಗುತ್ತಿದೆ. ಒಂದು ವೇಳೆ ಏಪ್ರಿಲ್‌ 14 ರ ಬಳಿಕವೂ ಲಾಕ್‌ಡೌನ್‌ ಮುಂದುವರಿಸಿದರೆ ನಮ್ಮ ಪರಿಸ್ಥಿತಿ ಏನು? ಕೈಯಲ್ಲಿ ದುಡ್ಡಿಲ್ಲ, ಹೋಗಲು ವಾಹನ ವ್ಯವಸ್ಥೆ ಇಲ್ಲ. ಏನು ಮಾಡುವುದು’ ಎಂದು ಪರಿತಪಿಸಿದರು.

‘ಪುಣೆ ಮತ್ತು ಲಾತೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೃಷಿ ತರಬೇತಿಗಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ 13 ಜನ ಒಂದು ವರ್ಷದ ಹಿಂದೆ ತೆರಳಿದ್ದೆವು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದ ಬಳಿಕ ನಾವು ಉಳಿದುಕೊಂಡಿದ್ದ ಕೊಠಡಿಯನ್ನು ಖಾಲಿ ಮಾಡುವಂತೆ ಅಲ್ಲಿಯ ಪೊಲೀಸರು ತಾಕೀತು ಮಾಡಿದರು. ಕೈಯಲ್ಲಿ ಇದ್ದ ಅಲ್ಪಸ್ವಲ್ಪ ಹಣದಲ್ಲಿ ಲಾರಿ ಮೂಲಕ ಕೆಲ ದೂರ ಪ್ರಯಾಣಿಸಿ, ಮತ್ತೆ ಕೆಲ ದೂರು ನಡೆದುಕೊಂಡು ಇಲ್ಲಿವರೆಗೂ ಬಂದಿದ್ದೇವೆ’ ಎಂದು ಹೇಳಿದರು.

ಎಂಥ ಕಾಲ ಬಂತು:

‘ಜೈಲಿನಲ್ಲಿ ಬಂಧಿಯಾಗಿರುವ ಅನುಭವವಾಗುತ್ತಿದೆ. ಮನೆಯವರು ವಿಡಿಯೋ ಕಾಲ್‌ ಮೂಲಕ ಮಾತನಾಡಿ ಬೇಗ ಬನ್ನಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಸುರಕ್ಷಿತವಾಗಿದ್ದೇವೆ ಎಂದರೂ ಕೇಳುತ್ತಿಲ್ಲ. ಎಂಥ ಕಾಲ ಬಂತು ನಮಗೆ’ ಎಂದು ಉತ್ತರಪ್ರದೇಶದ ಅಲಿಘಡ ಜಿಲ್ಲೆಯ ಗಂಗೀರಿ ಗ್ರಾಮದ ಮಹಮ್ಮದ್‌ ನದೀಂ, ಅಕ್ರಂ ಬೂರಾ, ರೆಹಾನ್‌ ಕಣ್ಣೀರು ಸುರಿಸಿದರು.

‘ಬೆಂಗಳೂರಿನ ಕೆ.ಆರ್‌.ಮಾರ್ಕೆಟ್‌, ಸಿಟಿ ಮಾರ್ಕೆಟ್‌ನಲ್ಲಿ ನಾವು ಐದು ಜನ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದೆವು. ಲಾಕ್‌ಡೌನ್‌ ಆದ ಬಳಿಕ ಊರಿಗೆ ತೆರಳಲು ಮಾರ್ಚ್ 29ರಂದು ಹೊರಟೆವು. ಸಿಕ್ಕ ಲಾರಿಯನ್ನು ಏರಿದೆವು. ಅವರು ಹೇಳಿದಷ್ಟು ಹಣ ಕೊಟ್ಟು ಅಂತೂ, ಇಂತೂ ಇಲ್ಲಿಯ ವರೆಗೆ ಬಂದಿದ್ದೇವೆ. ಮುಂದಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಗೋಳಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.