ADVERTISEMENT

ಕೊರೊನಾ ಸೋಂಕು ಆತಂಕ ಬೇಡ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:32 IST
Last Updated 2 ಮೇ 2021, 14:32 IST
ವಿಜಯಪುರ ನಗರ ರಾಜಕುಮಾರ್‌ ಲೇಔಟ್‌ನ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಕೋವಿಡ್ ಲಸಿಕೆ ಅಭಿಯಾನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ವಿಜಯಪುರ ನಗರ ರಾಜಕುಮಾರ್‌ ಲೇಔಟ್‌ನ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಕೋವಿಡ್ ಲಸಿಕೆ ಅಭಿಯಾನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು   

ವಿಜಯಪುರ: ಕೊರೊನಾ ಸೋಂಕು ಕುರಿತಂತೆ ಸಾರ್ವಜನಿಕರು ಆತಂಕ ಪಡಬಾರದು, ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ, ಸುಳ್ಳು ವದಂತಿಯನ್ನು ನಂಬಬಾರದು, ಲಸಿಕೆ ಪಡೆದು ಸೋಂಕು ಹರಡದಂತೆ ತಡೆಗಟ್ಟಲು ಸಹಕರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರ ರಾಜಕುಮಾರ್‌ ಲೇಔಟ್‌ನ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆವರಣ ಹಾಗೂ ಭೂತನಾಳ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂಜಾಗೃತಾ ದೃಷ್ಟಿಯಿಂದ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಬಳಸಿ, ಸಾರ್ವಜನಿಕ ಸ್ಥಳದಲ್ಲಿ ಉಗಳಬಾರದು, ಪರಸ್ಪರ ಅಂತರ ಕಾದುಕೊಳ್ಳಬೇಕು, ಮಾಸ್ಕ ಧರಿಸಿ, ಕೈಗಳನ್ನು ಆಗಾಗ ಸೋಪಿನಿಂದ ತೊಳೆಯಿರಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ADVERTISEMENT

ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಆರ್.ಟಿ.ಪಿ.ಸಿ.ಆರ್ ಹಾಗೂ ಎಚ್.ಆರ್.ಸಿ.ಟಿ ಸ್ಕ್ಯಾನ್‌ ಪರೀಕ್ಷೆ ಮಾಡಿಸಿಕೊಳ್ಳಿ, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ ಎಂದರು.

ಕೋವಿಡ್‌ ವಾರಿಯರ್ಸ್‌ಗಳಾದ ವೈದ್ಯರು, ಸ್ವಚ್ಛತಾ ಕರ್ಮಿಗಳು, ಪೊಲೀಸ್ ಸಿಬ್ಬಂದಿಯನ್ನು ಗೌರವದಿಂದ ಕಾಣಿ, ಕೋವಿಡ್‌ ಮಾರ್ಗಸೂಚಿ ಮುರಿದು ಪೊಲೀಸ್ ಸಿಬ್ಬಂದಿಯೊಂದಿಗೆ ವಾದಕ್ಕಿಳಿಯದೇ ಎಲ್ಲರೂ ಸಹ ಜವಾಬ್ದಾರಿಯುತ ನಡೆದುಕೊಳ್ಳಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸಂಜಯ್ ಪಾಟೀಲ ಕನಮಡಿ, ಚಂದ್ರು ಚೌಧರಿ, ಸಂತೋಷ ಪಾಟೀಲ, ಡಾ.ಜನ್ನತ್ ಮುಶ್ರಿಫ್, ಡಾ.ಉಮೇಶ ನಾಲಾ, ಚಿದಾನಂದ ಹಿರೇಮಠ, ಎಂ.ಎಸ್.ರುದ್ರಗೌಡ್ರ, ಆರ್.ಎಸ್.ಮನಗೂಳಿ, ಆರ್.ಎಸ್.ಕೋಳಿ, ರವಿ ದೇಶಪಾಂಡೆ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.