ADVERTISEMENT

ವಿಜಯಪುರ: ಹಳೇ ಸಿನಿಮಾ ಮೊರೆ ಹೋದ ಚಿತ್ರಮಂದಿರ!

ಕೋವಿಡ್‌ ಪರಿಣಾಮ ರಿಲೀಸ್‌ ಆಗದ ಹೊಸ ಸಿನಿಮಾಗಳು; ಉಳಿವಿಗಾಗಿ ಸಿನಿಮಾ ಮಂದಿರಗಳ ಪರದಾಟ

ಬಸವರಾಜ ಸಂಪಳ್ಳಿ
Published 31 ಆಗಸ್ಟ್ 2021, 19:30 IST
Last Updated 31 ಆಗಸ್ಟ್ 2021, 19:30 IST
ವಿಜಯಪುರ ನಗರದ ‘ಡ್ರೀಮ್‌ ಲ್ಯಾಂಡ್‌’ ಟಾಕೀಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಡಾ.ರಾಜ್‌ಕುಮಾರ್‌ ಅಭಿನಯದ ‘ದಾರಿ ತಪ್ಪಿದ ಮಗ’ ಚಲನಚಿತ್ರ ವೀಕ್ಷಣೆಗಾಗಿ ಕಾದುಕುಳಿತಿರುವ ಹಿರಿಯ ಪ್ರೇಕ್ಷಕರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ‘ಡ್ರೀಮ್‌ ಲ್ಯಾಂಡ್‌’ ಟಾಕೀಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಡಾ.ರಾಜ್‌ಕುಮಾರ್‌ ಅಭಿನಯದ ‘ದಾರಿ ತಪ್ಪಿದ ಮಗ’ ಚಲನಚಿತ್ರ ವೀಕ್ಷಣೆಗಾಗಿ ಕಾದುಕುಳಿತಿರುವ ಹಿರಿಯ ಪ್ರೇಕ್ಷಕರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಕೋವಿಡ್‌ ಪರಿಣಾಮ ಒಂದೂವರೆ ವರ್ಷದಿಂದ ಬಹುತೇಕ ಬಾಗಿಲು ಮುಚ್ಚಿರುವ ಸಿನಿಮಾ ಮಂದಿರಗಳು ಇದೀಗ ಪುನರಾರಂಭವಾಗಿವೆ. ಆದರೆ, ಹೊಸ ಚಿತ್ರಗಳು ತೆರೆಕಾಣದಿರುವುದರಿಂದ ಹಳೇ ಸಿನಿಮಾಗಳ ಪ್ರದರ್ಶನಕ್ಕೆ ಮೊರೆಹೋಗಿವೆ.

ಹೌದು, ಸಿನಿಮಾ ಮಂದಿರಗಳತ್ತ ಹೇಗಾದರೂ ಮಾಡಿಪ್ರೇಕ್ಷಕರನ್ನು ಸೆಳೆಯಲು ವಿಜಯಪುರ ನಗರದ ‘ಡ್ರೀಮ್‌ ಲ್ಯಾಂಡ್‌’ ಟಾಕೀಸ್‌ನಲ್ಲಿ ಒಂದು ವಾರದಿಂದ ‘ವರನಟ’ ಡಾ.ರಾಜ್‌ಕುಮಾರ್‌ ಅಭಿನಯದ ‘ದಾರಿ ತಪ್ಪಿದ ಮಗ’ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

ಪ್ರತಿದಿನ ಮಧ್ಯಾಹ್ನ 12, 3 ಮತ್ತು 6 ಗಂಟೆಗೆ ಮೂರು ಪ್ರದರ್ಶನ ಕಾಣುತ್ತಿದೆ. ಆದರೆ, ಬೆರಳೆಣಿಕೆ ಮಂದಿ ಡಾ.ರಾಜ್‌ ಅಭಿಮಾನಿಗಳು ಸಿನಿಮಾ ಮಂದಿರಕ್ಕೆ ಬಂದು ವೀಕ್ಷಿಸಿ, ಆನಂದಿಸುತ್ತಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿನಿಮಾ ಮಂದಿರದ ವ್ಯವಸ್ಥಾಪಕ ನೌಶಾದ್‌ ಸಯ್ಯದ್‌, ಕೋವಿಡ್‌ ಕಾರಣಕ್ಕೆ ಸಿನಿಮಾ ಮಂದಿರಗಳಲ್ಲಿ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು, ಪರಸ್ಪರ ಅಂತರ ಕಾಪಾಡಬೇಕು, ಹ್ಯಾಂಡ್‌ ಸ್ಯಾನಿಟೈಸ್‌ ಮಾಡಬೇಕು, ಮಾಸ್ಕ್‌ ಧರಿಸಬೇಕು ಎಂಬ ನಿರ್ಬಂಧಗಳನ್ನು ಹೇರಿರುವುದರಿಂದಸದ್ಯ ಯಾವುದೇ ಸಿನಿಮಾಗಳು ರಿಲೀಸ್‌ ಆಗ್ತಿಲ್ಲ. ಹೀಗಾಗಿ ನಮ್ಮ ಉಳಿವಿಗಾಗಿ ಹಳೇ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದೇವೆ ಎಂದರು.

ಡಾ.ರಾಜ್‌, ವಿಷ್ಣುವರ್ಧನ, ಅಂಬರೀಶ್‌ ಮತ್ತಿತರ ಕನ್ನಡ ನಟರ ಸಿನಿಮಾ ಎಂದರೆ ಪ್ರೇಕ್ಷಕರು ಟಾಕೀಸ್‌ಗೆ ಬರುತ್ತಾರೆ. ಈ ಮೂಲಕವಾದರೂ ಸಿನಿಮಾ ಮಂದಿರಗಳನ್ನು ಚಾಲನೆ ಮಾಡೋಣ ಎಂದು ಪ್ರದರ್ಶನ ಆರಂಭಿಸಿದ್ದೇವೆ ಎಂದು ಹೇಳಿದರು.

ಶನಿವಾರ ಮತ್ತು ಭಾನುವಾರ ‘ವಾರಂತ್ಯ ಕರ್ಫ್ಯೂ’ ಇದ್ದ ಕಾರಣ ಹಳೇ ಸಿನಿಮಾ ಪ್ರದರ್ಶನವೂ ನಷ್ಠವುಂಟು ಮಾಡುತ್ತಿದೆ. ಪ್ರತಿ ಶೋಗೆ 20 ರಿಂದ 25 ಮಂದಿ ಪ್ರೇಕ್ಷಕರು ಮಾತ್ರ ಬರುತ್ತಿದ್ದಾರೆ. ಖರ್ಚು ಸರಿದೂಗುತ್ತಿಲ್ಲ. ನಷ್ಠವಾದರೂ ಪರವಾಗಿಲ್ಲ. ಸಿನಿಮಾ ಮಂದಿರ ಓಪನ್‌ ಆದರೆ ಜನರು ನಿಧಾನವಾಗಿ ಬರಲು ಆರಂಭಿಸುತ್ತಾರೆ ಎಂಬ ಕಾರಣಕ್ಕೆ ಹಳೇ ಸಿನಿಮಾಗಳ ಪ್ರದರ್ಶನ ನಡೆಯುತ್ತಿವೆ ಎಂದು ಹೇಳಿದರು.

ಹಳೇ ಸಿನಿಮಾಗಳು ಪ್ರಿಂಟ್‌ ಬರುತ್ತಿಲ್ಲ. ಈಗ ಆ ಸಿನಿಮಾಗಳು ಸೆಟಲೈಟ್‌ ಮೂಲಕ(ಯುಎಫ್‌ಒ ಡಿಜಿಟಲ್‌ ಸಿನಿಮಾ) ತೆರೆ ಕಾಣುತ್ತಿವೆ. ಚಿತ್ರಗಳ ಗುಟಮಟ್ಟ, ಧ್ವನಿ, ಸಂಗೀತ ಸ್ಪಷ್ಟವಾಗಿವೆ. ಹಳೇ ಸಿನಿಮಾ ನೋಡಲು ಇದೊಂದು ಅಪರೂಪದ ಅವಕಾಶ. ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಿ ಆನಂದಿಸಬೇಕು ಎಂದರು.

ಎರಡನೇ ಬಾರಿ ವೀಕ್ಷಣೆ:ಹಳೇ ಸಿನಿಮಾ ನೋಡಲು ಟಾಕೀಸ್‌ಗೆ ಜನ ಬರುವುದು ಕಡಿಮೆ. ಅದರಲ್ಲೂ ಕೋವಿಡ್‌ ಕಾರಣದಿಂದ ಅಂಜಿಕೆ ಹೆಚ್ಚು. ಆದರೆ, ಡಾ. ರಾಜ್‌ ಅಭಿಮಾನಿಯೊಬ್ಬರು ಡ್ರೀಮ್‌ ಲ್ಯಾಂಡ್‌ ಟಾಕೀಸ್‌ನಲ್ಲಿ‘ದಾರಿ ತಪ್ಪಿದ ಮಗ’ ಸಿನಿಮಾವನ್ನು ಸದ್ಯ ಎರಡು ಬಾರಿ ನೋಡಿದ್ದಾರೆ.

ಹೌದು, ವಿಜಯಪುರ ನಗರದ ‘ಸಪ್ನಾ’ ಬಾರ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಮೂಲತಃ ಉಡುಪಿ ಜಿಲ್ಲೆ ಕಾರ್ಕಳದ ಆರ್‌.ಕೆ. ಶೆಟ್ಟಿ ಅವರು ಸೋಮವಾರ ಮತ್ತು ಮಂಗಳವಾರ ಎರಡು ಪ್ರದರ್ಶನವನ್ನು ನೋಡಿ ಆನಂದಿಸಿದ್ದಾರೆ.

‘ನಾನು ಅಣ್ಣವ್ರ ಅಭಿಮಾನಿ. ಅವರ ಎಲ್ಲ ಸಿನಿಮಾಗಳನ್ನು ರಿಲೀಸ್‌ ಆದಾಗ ತಪ್ಪದೇ ನೋಡಿದ್ದೇನೆ. ದಾರಿ ತಪ್ಪಿದ ಮಗ ಸಿನಿಮಾ ಆರಂಭದಲ್ಲಿ ರಿಲೀಸ್‌ ಆಗಿದ್ದಾಗ ನಾಲ್ಕು ಬಾರಿ ನೋಡಿ ಆನಂದಿಸಿದ್ದೆ. ಇದೀಗ ಮತ್ತೆ ಎರಡು ಬಾರಿ ನೋಡಿ ಹಳೇಯ ದಿನಗಳನ್ನು ಮೆಲುಕು ಹಾಕಿದೆ. ಬಹಳ ಖುಷಿಯಾಯಿತು’ ಎಂದು ಹೇಳಿದರು.

****

ಕೋವಿಡ್‌ ಸಂಕಷ್ಟದಲ್ಲಿ ಸಿನಿಮಾ ಮಂದಿರಗಳಿಗೆ ಸರ್ಕಾರದಿಂದ ನಯಾಪೈಸೆ ಸಹಾಯ ಲಭಿಸಿಲ್ಲ. ಕರೆಂಟ್‌ ಬಿಲ್‌, ಕಾರ್ಪೊರೇಶನ್‌ ತೆರಿಗೆಯೂ ಕಡಿತ ಮಾಡಿಲ್ಲ. ಕೊನೇ ಪಕ್ಷ ಇವೆರಡನ್ನು ಕಡಿತ ಮಾಡಿದ್ದರೆ ಅನುಕೂಲ.
–ನೌಶಾದ್‌ ಸಯ್ಯದ್‌,ವ್ಯವಸ್ಥಾಪಕ, ಡ್ರೀಮ್‌ ಲ್ಯಾಂಡ್‌ ಟಾಕೀಸ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.