ADVERTISEMENT

ಕೋವಿಡ್‌ ಪೀಡಿತ ವಿಜಯಪುರ ಕುಟುಂಬದಿಂದ ಪ್ರಧಾನಿ, ಸಿಎಂಗೆ ಟ್ವೀಟ್‌

ಸ್ಥಳೀಯರಿಂದ ತಾರತಮ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 11:11 IST
Last Updated 1 ಆಗಸ್ಟ್ 2020, 11:11 IST
ವಿಜಯಪುರದ ಚಾಲುಕ್ಯ ನಗರದಲ್ಲಿ ಕೋವಿಡ್ ಪೀಡಿತ ಕುಟುಂಬವನ್ನು ಮಹಾನಗರ ಪಾಲಿಕೆ ಅಯುಕ್ತ ಶ್ರೀಹರ್ಷ ಶೆಟ್ಟಿ ಭೇಟಿ ನೀಡಿ ಮಾತುಕತೆ ನಡೆಸಿದರು.
ವಿಜಯಪುರದ ಚಾಲುಕ್ಯ ನಗರದಲ್ಲಿ ಕೋವಿಡ್ ಪೀಡಿತ ಕುಟುಂಬವನ್ನು ಮಹಾನಗರ ಪಾಲಿಕೆ ಅಯುಕ್ತ ಶ್ರೀಹರ್ಷ ಶೆಟ್ಟಿ ಭೇಟಿ ನೀಡಿ ಮಾತುಕತೆ ನಡೆಸಿದರು.   

ವಿಜಯಪುರ: ‘ನನ್ನ ಪತಿಗೆ ಕೋವಿಡ್‌ ಪಾಸಿಟಿವ್‌ ಬಂದಿರುವುದರಿಂದ ನಮ್ಮ ಮನೆಗೆ ಹಾಲು ಹಾಕುವವರು, ಮನೆಗೆಲಸದವರು ಬರದಂತೆ ಸ್ಥಳೀಯರು ತಡೆಯೊಡ್ಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಇಲ್ಲಿನ ಚಾಲುಕ್ಯ ನಗರದ ಮಹಿಳೆಯೊಬ್ಬರು ಪ್ರಧಾನಿ ಕಾರ್ಯಾಲಯ, ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಟ್ವೀಟ್‌ ಮಾಡಿದ್ದಾರೆ.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್‌ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ,ಸ್ಥಳೀಯರು ತಾರತಮ್ಯ ಮಾಡುತ್ತಿದ್ದಾರೆ ಎಂಬ ಕೋವಿಡ್‌ ಪೀಡಿತ ಕುಟುಂಬದವರ ಆರೋಪವನ್ನು ಅಲ್ಲಗಳೆದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತ ಶ್ರೀಹರ್ಷ ಶೆಟ್ಟಿ, ‘ಪುಣೆಯಿಂದ ಬಂದಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ವಾರದ ಹಿಂದೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ. ಮನೆಯಲ್ಲಿ ಏಳು ಜನ ಸದಸ್ಯರಿದ್ದಾರೆ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣಕ್ಕೆ ಮನೆಗೆಲಸವರು ಅಂಜಿಕೊಂಡು ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಜೊತೆಗೆ ಎರಡು ದಿನದಿಂದ ಹಾಲು ಹಾಕುವವರನ್ನುನಿಲ್ಲಿಸಿದ್ದಾರೆ. ಸ್ಥಳೀಯರು ಯಾರೂ ತಾರತಮ್ಯ ಮಾಡುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಹಾಲು ಸೇರಿದಂತೆ ಕುಟುಂಬಕ್ಕೆ ಅಗತ್ಯವಿರುವ ವಸ್ತುಗಳನ್ನು ಪಾಲಿಕೆ ಸಿಬ್ಬಂದಿ ಪೂರೈಕೆ ಮಾಡುವುದಾಗಿ ಕುಟುಂಬಕ್ಕೆ ಧೈರ್ಯ ಹೇಳಿ ಬಂದಿರುವುದಾಗಿ’ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.