ADVERTISEMENT

ದರೋಡೆಕೋರರು ಸೇರಿದಂತೆ ಒಂಬತ್ತು ಜನರಿಗೆ ಕೋವಿಡ್‌

ಸಿಂದಗಿ ಕೋರ್ಟ್‌ನ ನ್ಯಾಯಿಕ ಅಧಿಕಾರಿಗಳಿಗೂ 14 ದಿನಗಳ ಹೋಂ ಕ್ವಾರಂಟೈನ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 16:13 IST
Last Updated 20 ಜೂನ್ 2020, 16:13 IST

ವಿಜಯಪುರ: ಇಬ್ಬರು ದರೋಡೆಕೋರರು ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ಒಂಬತ್ತು ಜನರಿಗೆ ಕೋವಿಡ್‌ ಪಾಸಿಟಿವ್‌ ದೃಡಪಟ್ಟಿದೆ.

ಆಲಮೇಲ ಪೊಲೀಸ್‌ ಠಾಣೆ ವ್ಯಾಪ್ತಿಯ ಹಿರೇಬೆವನೂರ ಗ್ರಾಮದ ಬಳಿ ಜೂನ್‌ 17 ನಡೆದ ದರೋಡೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಧನ ಕಾರ್ಯಾಚರಣೆಯಲ್ಲಿ ತೊಡಗಿದ್ದ 39 ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮಹಾರಾಷ್ಟ್ರ ಸಂಪರ್ಕದಿಂದ 4 ಮತ್ತು 17 ವರ್ಷದ ಇಬ್ಬರು ಬಾಲಕಿಯರು, 23, 42 ಮತ್ತು 35 ವರ್ಷದ ಮೂವರು ಮಹಿಳೆಯರಿಗೆ ಮತ್ತು 59 ವರ್ಷದ ವ್ಯಕ್ತಿಗೆ ಹಾಗೂ ಬಿಹಾರ ಸಂಪರ್ಕದಿಂದ 44 ವರ್ಷದ ವ್ಯಕ್ತಿಗೆ ಸೋಂಕು ದೃಡಪಟ್ಟಿದೆ. 27 ಮತ್ತು 36 ವರ್ಷ ಇಬ್ಬರಿಗೆ ತಗುಲಿರುವ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ADVERTISEMENT

ದ್ರಾವಣ ಸಿಂಪಡಣೆಗೆ ಸೂಚನೆ:

ದರೋಡೆಕೊರರನ್ನು ಸಿಂದಗಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿ ಕೋವಿಡ್-19 ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಿಂದಗಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನ್ಯಾಯಾಲಯದ ಕಾರ್ಯಕಲಾಪ ಸ್ಥಗಿತಗೊಳಿಸದೆ ಸಂಬಂಧಪಟ್ಟ ನ್ಯಾಯಾಲಯದ ನ್ಯಾಯಿಕ ಅಧಿಕಾರಿಗಳು ಕೂಡ 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ನ್ಯಾಯಾಲಯದ ಸಂಕೀರ್ಣದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲು ಕೈಗೊಂಡ ಕ್ರಮದ ಬಗ್ಗೆ ವರದಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸಿಂದಗಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುಣಮುಖ:

ಕೋವಿಡ್‌ 19ರಿಂದ ಗುಣಮುಖರಾದ 9 ಜನ ಶನಿವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದರು.

ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಮ

ಜಿಲ್ಲೆಯಲ್ಲಿ ಕ್ವಾರಂಟೈನ್ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಕೆಲವು ವ್ಯಕ್ತಿಗಳು ನಿಯಮ ಮೀರಿ ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗಿರುವುದು ಕಂಡು ಬಂದಿದೆ ಎಂದರು.

ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಶಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಜೂನ್‌18 ರಂದು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕುರಿತು ಜಿಲ್ಲಾ ಕೋವಿಡ್ ವಾರ್ ರೂಂನಿಂದ ಮಾಹಿತಿ ಬಂದಿದೆ. ಇಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಎಸ್‍ಪಿ ಅವರಿಗೆ ದೂರು ದಾಖಲಿಸಲು ಕೋರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.