ಹೊರ್ತಿ ಸಮೀಪದ ನಾಗಠಾಣ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆಗೆ ತೊಗರಿ ಬೆಳೆ ಹಾಳಾಗಿರುವ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಮಾಜಿ ಶಾಸಕ ದೇವಾನಂದ ಎಫ್.ಚವ್ಹಾಣ ಭೇಟಿ ನೀಡಿದರು.
ಹೊರ್ತಿ: ಸತತ ಮತ್ತು ಭಾರಿ ಮಳೆಯಿಂದ ತೊಗರಿ, ಗೋವಿನ ಜೊಳ, ಶೇಂಗಾ, ಹತ್ತಿ, ದ್ರಾಕ್ಷಿ, ಉಳ್ಳಾಗಡ್ಡಿ ಮುಂತಾದ ಬೆಳೆಗಳು ಹಾನಿಯಾದ ರೈತರಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಈ ಕೂಡಲೇ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಮತ್ತು ಮತ ಕ್ಷೇ ತ್ರದ ಎಲ್ಲ ಗ್ರಾಮಗಳ ರಸ್ತೆಗಳು ಕೂಡಾ ಹದಗೆಟ್ಟಿವೆ ಈ ರಸ್ತೆಗಳ ದುರಸ್ತಿಗೆ ಕ್ರಮ ಕೈ ಗೊಳ್ಳಬೇಕು' ಎಂದು ಮಾಜಿ ಶಾಸಕ ದೇವಾನಂದ ಎಫ್.ಚವ್ಹಾಣ ಆಗ್ರಹಿಸಿದರು.
ಸಮೀಪದ ನಾಗಠಾಣ ಮತಕ್ಷೇತ್ರದಲ್ಲಿ ಇತ್ತೀಚೆಗೆ ಸುರಿದ ಸತತ ಮತ್ತು ಭಾರಿ ಮಳೆಗೆ ತೊಗರಿ ಬೆಳೆ ಹಾಳಾಗಿರುವ ರೈತರ ಹೊಲಗಳಿಗೆ ಭೇಟಿ ನೀಡಿ, ರೈತರಿಗೆ ಆತ್ಮ ಸ್ಥೈರ್ಯ ತುಂಬಿ ಮಾತನಾಡಿದರು.
'ರೈತರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ, ಸರ್ಕಾರ ರೈತರಿಗೆ ಧೈರ್ಯ ತುಂಬಿ ಈ ಕೂಡಲೇ ಪರಿಹಾರ ನೀಡಲು ಮುಂದಾಗಬೇಕು' ಎಂದು ಅವರು ಒತ್ತಾಯಿಸಿದರು.
ಈ ವೇಳೆ, ಸಚಿನ್ ವಾಲಿ, ಸಿದ್ದು ಲೋಣಿ, ಸಾಗರ ಶಿಂಧೆ ಪ್ರವೀಣ ಪಾಟೀಲ ಚಂದು ಕಲ್ಮನಿ, ವಿನೋದ್ ದೇವರ, ಪ್ರಕಾಶ್ ಪಾಟೀಲ ದಯಾನಂದ ಕಟಗೇರಿ, ಸಿದ್ಧರಾಮ ಕೊಟ್ಟಲಗಿ,ಬಸವರಾಜ ಭoಡರಕವಟೆ, ರಾಮ ಮೇತ್ರಿ,ಗುರುಸಿದ್ದಪ್ಪ ರಾ, ಸಾವಳಸಂಗ, ಮುದುಕು ಬಿರಾದಾರ ಸೇರಿದಂತೆ ಗ್ರಾಮಗಳ ರೈತರು ಇದ್ದರು.
‘ನಾವು ಸಾಲ ಮಾಡಿ ತೊಗರಿ, ಗೋವಿನ ಜೋಳ, ಹತ್ತಿ, ಉಳ್ಳಾಗಡ್ಡಿ, ಶೇಂಗಾ ಬೀಜ ತಂದು ಬಿತ್ತಿ ಗೊಬ್ಬರ ಹಾಕಿ ಬೆಳೆಗಳಿಗೆ ಖರ್ಚು ಮಾಡಿದ್ದೇವೆ. ಈ ವರ್ಷ ಸತತ ಮತ್ತು ಭಾರಿ ಮಳೆಗೆ ಬೆಳೆಗಳು ನೀರು ಪಾಲಾಗಿ ಸಂಪೂರ್ಣ ಹಾಳಾಗಿವೆ. ಸರ್ಕಾರ ಮತ್ತು ಜಿಲ್ಲಾಡಳಿತ ಹಾನಿಗೊಂಡ ನಾಗಠಾ ಣ ಮತಕ್ಷೇತ್ರದ ಎಲ್ಲ ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಮತ್ತು ಮಳೆಗೆ ಮತಕ್ಷೇತ್ರದ ನಗರ- ಪಟ್ಟಣ ಮತ್ತು ಎಲ್ಲ ಗ್ರಾಮಗಳ ರಸ್ತೆಗಳು ಕೂಡಾ ಹದಗೆಟ್ಟಿವೆ ಈ ರಸ್ತೆಗಳ ದುರಸ್ತಿಗೆ ಕ್ರಮ ಕೈ ಗೊಳ್ಳಬೇಕು’ ಎಂದು ರೈತರಾದ ಸಚಿನ್ ವಾಲಿ ಮತ್ತು ಗುರುಸಿದ್ದಪ್ಪ ರಾ.ಸಾವಳಸಂಗ ಕೋರಿದರು.
' ನಮ್ಮ ಈ ನಾಗಠಾಣ ಮತಕ್ಷೇತ್ರದ ಈ ಭಾಗವು ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುವ ಪ್ರದೇಶವಾದ್ದರಿಂದ ಸಮರ್ಪಕವಾಗಿ ಮಳೆ ಆಗದೇ, ಮಳೆ ಕೈಕೊಟ್ಟು ಬೆಳೆ ಕೈಕೊಟ್ಟಿದೆ. ಈ ಸಲ ಕೆರೆ ತುಂಬಿ ಬೆಳೆಗಳು ಚನ್ನಾಗಿ ಬರುತ್ತವೆ ಅಂತ ನಿರೀಕ್ಷೆ ಇಟ್ಟಿದ್ದೆವು. ಮಳೆಗೆ ಎಲ್ಲ ಬೆಳೆಗಳು ಹೂವು, ಕಾಯಿ, ಆಗುವ ಮುನ್ನವೇ ನೀರಲ್ಲೇ ನಿಂತು, ನೀರು ಪಾಲಾಗಿ ಕೈಗೆ ಬರುವ ಬೆಳೆಗಳು ಬಾರದೆ ಕೊಳೆತು ತುಂಬಾ ಹಾನಿ ಆಗಿದೆ' ಎಂದು ರೈತರಾದ ಸಿದ್ದು ಲೋಣಿ ಮತ್ತು ಮುದುಕು ಬಿರಾದಾರ ಅವರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.