ADVERTISEMENT

ಶಾ ಅಂತಹದೇನೂ ಹೇಳಿಲ್ಲ; 'ಕೈ' ಮೊಸಳೆ ಕಣ್ಣೀರಿಗೆ ದಲಿತರು ಸೋಲಬೇಡಿ: ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2024, 14:32 IST
Last Updated 28 ಡಿಸೆಂಬರ್ 2024, 14:32 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ‘ಬಾಬಾ ಸಾಹೇಬ್‌ ಅಂಬೇಡ್ಕರ್‌ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅವಮಾನ ಆಗುವಂತಹದೇನೂ ಹೇಳಿಲ್ಲ. ಗೌರವ ಇಟ್ಟುಕೊಂಡೇ ಮಾತನಾಡಿದ್ದಾರೆ, ಶಾ ಹೇಳಿಕೆ ನೂರಕ್ಕೆ ನೂರು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ' ಎಂದು ಸಂಸದ ರಮೇಶ ಜಿಗಿಜಿಣಗಿ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್‌ ಶಾ ಹೇಳಿರುವುದನ್ನು ಕಾಂಗ್ರೆಸ್‌ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಅವರ ಮಾತಿನ ತಾತ್ಪರ್ಯವೇ ಬೇರೆಯಾಗಿತ್ತು ಎಂದರು.

ಬಿಜೆಪಿಗೆ ಅಂಬೇಡ್ಕರ್‌ ಮೇಲೆ ಸಂಪೂರ್ಣ ಗೌರವ ಇದೆ. ಮೋದಿ, ಅಮಿತ್‌ ಶಾ, ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಲು, ಕೆಟ್ಟ ಹೆಸರು ತರಲು ಕಾಂಗ್ರೆಸ್‌ ದಲಿತರ ದಾರಿ ತಪ್ಪಿಸುವ ನಾಟಕವಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಅಂಬೇಡ್ಕರ್‌ ಸತ್ತಾಗ ಮಣ್ಣಲ್ಲಿ ಇಡಲು ಆರು ಅಡಿ ಜಾಗ ನೀಡದ ಕಾಂಗ್ರೆಸ್‌ಗೆ ಈಗ ಅಂಬೇಡ್ಕರ್‌ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಮೊದಲಿನಿಂದಲೂ ದಲಿತರನ್ನು ಹೀನಾಯವಾಗಿ ನಡೆಸಿಕೊಂಡಿದೆ, ಯಾವುದೇ ಸವಲತ್ತು ಕೊಟ್ಟಿಲ್ಲ, ಹೀಗಾಗಿ ಯಾವ ಕಾರಣಕ್ಕೂ ಕಾಂಗ್ರೆಸ್‌ನ ಮೊಸಳೆ ಕಣ್ಣೀರಿಗೆ ದಲಿತರು ಸೋಲಬೇಡಿ ಎಂದು ಮನವಿ ಮಾಡಿದರು.

60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ದಲಿತರಿಗೆ ಕೊಟ್ಟ ಕೊಡುಗೆ ಏನು? ಕಾಂಗ್ರೆಸ್‌ನವರು ಬಾಯಲ್ಲಿ ದಲಿತರ ಉದ್ದಾರದ ಬಗ್ಗೆ ಹೇಳಿದರು. ಆದರೆ, ದಲಿತರನ್ನು ಹೀನಾಯವಾಗಿ ನಡೆಸಿಕೊಂಡು ಬಂದಿದ್ದಾರೆ. ದಲಿತರಿಗೆ ಕಾಂಗ್ರೆಸ್‌ ಮಾಡಿರುವುದು ಮಣ್ಣು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನತಾ ಪರಿವಾರವನ್ನು ಬಿಟ್ಟು ನಾನು ಬಿಜೆಪಿಗೆ ಸೇರುವಾಗ ದಲಿತ ಸಮುದಾಯ ನನ್ನ ಮೇಲೆ ಬಾರೀ ಒತ್ತಡ ಹೇರಿ ಯಾವುದೇ ಕಾರಣಕ್ಕೂ ಬಿಜೆಪಿ ಸೇರಬಾರದು ಎಂದರು. ಆಗ ನಾನು ಅಂಬೇಡ್ಕರ್‌ಗೆ ಕಾಂಗ್ರೆಸ್‌ ಮಾಡಿರುವ ಅವಮಾನವನ್ನು ದಲಿತರ ಎದುರು ಬಿಚ್ಚಿಟ್ಟು, ಬಿಜೆಪಿ ಸೇರುವ ತೀರ್ಮಾನ ಮಾಡಿದೆ ಎಂದರು.

ಅಂಬೇಡ್ಕರ್‌ಗೆ ಕಾಂಗ್ರೆಸ್ ಪಕ್ಷ ಎಂದಿಗೂ ಭಾರತ ರತ್ನ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಿಲ್ಲ. ಅಂಬೇಡ್ಕರ್‌ ಅವರನ್ನು ಸೋಲಿಸಿದ ನಾರಾಯಣ ಸಾಧುಭಾ ಕಜ್ರೋಳಕರ್‌ಗೆ ಪದ್ಮ ಭೂಷಣ ನೀಡಿ ಗೌರವಿಸಿದೆ. ಅಂಬೇಡ್ಕರ್‌ ವಿರುದ್ಧ ನೆಹರೂ ಚುನಾವಣಾ ಪ್ರಚಾರ ಮಾಡಿದರು. ಇದು ಕಾಂಗ್ರೆಸ್‌ಗೆ ಮತ್ತು ನೆಹರೂ ಅವರಿಗೆ ಅಂಬೇಡ್ಕರ್‌ ಬಗ್ಗೆ ಇದ್ದ ಅಸಹನೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಅಂಬೇಡ್ಕರ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಬರೆದ ಪತ್ರವನ್ನು ಕಾಂಗ್ರೆಸ್‌ ನವರು ಏಕೆ ಮುಚ್ಚಿಟ್ಟುಕೊಂಡಿದ್ದಾರೆ. ಧೈರ್ಯ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. 

ವೋಟ್‌ ಹಾಕಿದ್ದಾರಾ
ಅಂಬೇಡ್ಕರ್‌ಗೆ ಅಮಿತ್‌ ಶಾ ಅವಮಾನ ಮಾಡಿರುವುದನ್ನು ಖಂಡಿಸಿ ಸಂಸದ ಜಿಗಜಿಣಗಿ ರಾಜೀನಾಮೆ ಕೊಟ್ಟು ಹೊರಬರಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿರುವ ಬಗ್ಗೆ ತೀವ್ರ ಅಸಮಾದಾನ ವ್ಯಕ್ತಪಡಿಸಿದ ಅವರು, ನಾನೇಕೆ ರಾಜೀನಾಮೆ ಕೊಡಬೇಕು? ನನಗೇನು ಅವರು ವೋಟ್‌ ಹಾಕಿದ್ದಾರಾ? ನನ್ನ ಸುದ್ದಿಗೆ ಸುಮ್ಮನೆ ಬರಬೇಡಿ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಅಂಬೇಡ್ಕರ್‌ ವಿರೋಧಿ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಮಾತನಾಡಿ, ಯಾವ ಕಾಂಗ್ರೆಸ್‌ ಪಕ್ಷ ಬಿ.ಆರ್‌.ಅಂಬೇಡ್ಕರ್‌ ಅವರಿಗೆ ನಿರಂತರವಾಗಿ ಅಗೌರವ, ಅವಮಾನ ಮಾಡಿದೆಯೋ ಅದೇ ಕಾಂಗ್ರೆಸ್‌ ಪಕ್ಷ ಈಗ ಅವರ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷ ಯಾವಾಗಲೂ ಅಂಬೇಡ್ಕರ್‌ ವಿರೋಧಿಯಾಗಿತ್ತು ಎಂದು ಆರೋಪಿಸಿದರು.

ಕಾಂಗ್ರೆಸ್‌ ಪಕ್ಷ ಎಂದೂ ಅಂಬೇಡ್ಕರ್‌ ಅವರ ಸ್ಮಾರಕಗಳನ್ನು ನಿರ್ಮಿಸಲಿಲ್ಲ ಹಾಗೂ ನಿರ್ಮಿಸಲು ಅವಕಾಶ ನೀಡಲಿಲ್ಲ. ಅಂಬೇಡ್ಕರ್‌ ಅವರು ನಿಧನರಾದಾಗ ಅವರನ್ನು ದೆಹಲಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಜಾಗ ಕೊಡಲಿಲ್ಲ, ಅವರ ದೇಹವನ್ನು ಮುಂಬೈಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಿಲ್ಲ, ಅವರ ಸ್ಮಾರಕಗಳನ್ನು ಸ್ಥಾಪಿಸಲು ಜಾಗ ಕೊಡಲಿಲ್ಲ ಎಂದು ಆಪಾದಿಸಿದರು. 

ಮಾಜಿ ಶಾಸಕ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಸಂಜೀವ ಐಹೊಳಿ, ಕಾಸುಗೌಡ ಬಿರಾದಾರ, ವಿಜಯ ಜೋಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.