ADVERTISEMENT

ವಿಜಯಪುರಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಆರಂಭಕ್ಕೆ ಆಗ್ರಹ

ಪದವಿ ಕಾಲೇಜುಗಳ ಒಕ್ಕೂಟದಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 11:14 IST
Last Updated 7 ಡಿಸೆಂಬರ್ 2022, 11:14 IST
ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಆರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು
ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಆರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು   

ವಿಜಯಪುರ: ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಆರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಒಕ್ಕೂಟದ ನೇತೃತ್ವದಲ್ಲಿ ಪ್ರಾಧ್ಯಾಪಕರು,ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಒಕ್ಕೂಟದ ಸಹ ಕಾರ್ಯದರ್ಶಿ ಡಾ.ಬಂದೇನವಾಜ್‌ ಕೋರಬು ಮಾತನಾಡಿ, 2023–24ನೇ ಸಾಲಿನಿಂದ ವಿಜಯಪುರ ನಗರದಲ್ಲಿ ನೂತನ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಾಗಲಕೋಟೆ ಜಿಲ್ಲೆಯಲ್ಲಿ ನೂತನ ವಿಶ್ವ ವಿದ್ಯಾಲಯ ಸ್ಥಾಪಿಸಲು ನಿರ್ಣಯ ತೆಗೆದುಕೊಂಡಿದೆ. ಈ ವಿಶ್ವ ವಿದ್ಯಾಲಯದಡಿ ವಿಜಯಪುರ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳನ್ನು ಸಂಯೋಜಿಸಬೇಕು. ಇಲ್ಲವೇ, ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವು ಬೆಳಗಾವಿ ನಗರದ ಹೊರವಲಯದಲ್ಲಿದ್ದು, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ವಾಹನ ಸೌಲಭ್ಯದ ಕೊರತೆಯಾಗಿದೆ. ವಿದ್ಯಾರ್ಥಿಗಳಿಗೆ ಮೈಗ್ರೇಶನ್ ಪ್ರಮಾಣ ಪತ್ರ, ಮೂಲ ಅಂಕಪಟ್ಟಿಗಳು, ಘಟಿಕೋತ್ಸವ ಪ್ರಮಾಣ ಪತ್ರ ಇತರೆ ದಾಖಲಾತಿಗಳು ಬೇಕಾದಲ್ಲಿ ಬೆಳಗಾವಿಗೆ ಹೋಗಬೇಕಿದ್ದು, ಇದರಿಂದ ಸಮಯ ಹಾಗೂ ಪ್ರಯಾಣ ವೆಚ್ಚ ಹೆಚ್ಚಾಗಲಿದೆ. ಮಹಾವಿದ್ಯಾಲಯದವರು ದಾಖಲೆಗಳನ್ನು ಅಲ್ಲಿಸಲು ಖುದ್ದಾಗಿ ಬೆಳಗಾವಿಗೆ ಹೋಗಿ ಬರುವ ವೆಚ್ಚ ಸಹ ಹೆಚ್ಚಾಗಲಿದೆ. ಸದ್ಯ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾಲೇಜುಗಳಿಗಿಂತ 130 ಕ್ಕೂ ಹೆಚ್ಚಿನ ಪದವಿ ಕಾಲೇಜುಗಳು ವಿಜಯಪುರ ಜಿಲ್ಲೆಯಲ್ಲಿವೆ ಎಂದರು.

ಒಕ್ಕೂಟದ ಅಧ್ಯಕ್ಷ ಎಸ್.ಎಸ್. ರಾಜಮಾನ್ಯ, ಕಾರ್ಯದರ್ಶಿ ಡಾ.ಎಸ್.ಐ. ಮೇತ್ರಿ, ಸಹ ಕಾರ್ಯದರ್ಶಿ ಪ್ರೊ.ಎಸ್.ಆರ್. ಡಬ್ಬಿ, ಕಾರ್ಯಾಧ್ಯಕ್ಷ ಡಾ.ವಿ.ಬಿ.ಗ್ರಾಮ ಪುರೋಹಿತ,ಖಜಾಂಚಿ ಪ್ರೊ.ಬಿ.ಎಸ್. ಬಾಪಗೊಂಡ, ಸಂಯೋಜನಾಧಿಕಾರಿ ಡಾ.ಅಶೋಕ ಜಾಧವ, ಪ್ರೊ.ಬಿ.ಎಸ್. ಬಗಲಿ, ಡಾ.ಬಿ.ಜಿ. ಪಾಟೀಲ, ಡಾ.ಎ.ಸಿ. ನಡುವಿನಮನಿ, ಪ್ರೊ.ಡಿ.ಬಿ. ಮುಗಡ್ಲಿಮಠ, ಪ್ರೊ.ಬಿ.ಎಚ್. ಅವಟಿ ಸೇರಿದಂತೆ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ ಸೇರಿದಂತೆ ವಿವಿಧ ಭಾಗಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.