ADVERTISEMENT

ವಸತಿ ನಿಲಯಗಳ ಅವ್ಯವಹಾರ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 13:50 IST
Last Updated 15 ಫೆಬ್ರುವರಿ 2024, 13:50 IST
ವಸತಿ ನಿಲಯಗಳ ಅನುದಾನ ದುರುಪಯೋಗ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧವಾರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು. 
ವಸತಿ ನಿಲಯಗಳ ಅನುದಾನ ದುರುಪಯೋಗ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧವಾರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.    

ವಿಜಯಪುರ: ವಸತಿ ನಿಲಯಗಳ ಅಸಮರ್ಪಕ ನಿರ್ವಹಣೆ ಹಾಗೂ ಅನುದಾನ ದುರುಪಯೋಗ ಮಾಡಿಕೊಂಡವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಜಯಪುರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಬುಧವಾರ ದಲಿತ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ದಲಿತ ರಕ್ಷಣಾ ವೇದಿಕೆ ಜಿಲ್ಲಾ  ಘಟಕದ ಅಧ್ಯಕ್ಷ ಧರ್ಮರಾಯ ಸಾಲೋಟಗಿ ಮಾತನಾಡಿ, ‘ವಸತಿ ನಿಲಯಗಳಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮಗಳನ್ನು ತಡೆಗಟ್ಟಬೇಕು. ಇಂಡಿ ಹಾಗೂ ಚಡಚಣ ತಾಲ್ಲೂಕಿನಲ್ಲಿರುವ ಸರ್ಕಾರಿ ವಸತಿ ನಿಲಯಗಳಲ್ಲಿ ಅನುದಾನ ದುರಪಯೋಗ ಮಾಡಿಕೊಳ್ಳಲಾಗಿದೆ. ವಾರ್ಡನ್‍ಗಳು ನಿಲಯಗಳಿಗೆ ಬರುವುದೆ ಇಲ್ಲ. ಅಲ್ಲದೇ ಅಲ್ಲಿನ ಮಕ್ಕಳಿಗೆ ಯಾವುದೇ ಸೂಕ್ತ ಭದ್ರತೆ ಇಲ್ಲ’ ಎಂದರು.

‘ಅವ್ಯವಸ್ಥೆ ಆಗರವಾಗಿರುವ ವಸತಿ ನಿಲಯಗಳಲ್ಲಿನ ವಾರ್ಡನ್‍ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ನಾವು ಈಗಾಗಲೇ ಮನವಿ ಸಲ್ಲಿಸಿದ್ದೇವೆ. ನಾವು ಇಂಡಿಯಲ್ಲಿ ಈ ವಿಷಯದ ಕುರಿತು ಪ್ರತಿಭಟನೆ ನಡೆಸಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಕ್ರಮ ಜರುಗಿರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಫೆ.20 ಒಳಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಮಕ್ಕಳಿಗೆ ಸರಿಯಾದ ವಸತಿ ವ್ಯವಸ್ಥೆ ಮಾಡದೇ ಇದ್ದಲ್ಲಿ ಫೆ.25 ರಿಂದ ವಿಜಯಪುರ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸುನೀಲ ಗಾಯಕವಾಡ, ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಶೆಟ್ಟೆಪ್ಪ ಶಿವಪೂರ, ಇಂಡಿ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಸತೀಶ ಹರಿಜನ, ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಜಶೇಖರ ಶಿಂಧೆ, ಇಂಡಿ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ವಿಕಾಸ ಬಸನಸೋಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.