ಸಿಂದಗಿ: ಒಂಬತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು ಬುಧವಾರ ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅರ್ಧ ಗಂಟೆ ಕಾಲ ರಸ್ತೆ ತಡೆ ನಡೆಸಿದರು.
ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷೆ ಸರಸ್ವತಿ ಮಠ ಮಾತನಾಡಿ, ‘ಅಂಗನವಾಡಿ ನೌಕರರು 50 ವರ್ಷಗಳಿಂದ ಐಸಿಡಿಎಸ್ ಅಡಿಯಲ್ಲಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕಾಯಂಗೊಳಿಸಬೇಕು. ಕಾಯಂ ಆದೇಶ ಬರುವವರೆಗೆ ಕನಿಷ್ಠ ವೇತನ ನೀಡಬೇಕು. ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಎಂದು ನಿರಂತರ ಹೋರಾಟ ಮುಂದುವರಿದಿದೆ. ದೇಶದ ಕಾರ್ಪೋರೇಟ್ ಬಂಡವಾಳಗಾರರಿಗೆ ₹ 15.32 ಲಕ್ಷ ಕೋಟಿ ಸಾಲ ಮನ್ನಾ, ₹ 1.97 ಲಕ್ಷ ಕೋಟಿ ಸಬ್ಸಿಡಿಗಳನ್ನು ಉದಾರವಾಗಿ ಕೊಡುವ ಕೇಂದ್ರ ಸರ್ಕಾರ ದೇಶದ ಭವಿಷ್ಯವನ್ನು ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳೆವಣಿಗೆಗೆ ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ’ ಎಂದು ಟೀಕಿಸಿದರು.
ಸರ್ಕಾರದ ಧೊರಣೆ ವಿರುದ್ಧ ಅಂಗನವಾಡಿ ನೌಕರರು ಸಂಘ ಕಟ್ಟಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಆದರೆ ಈಗ ದೇಶದ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡುವ ಮೂಲಕ ಸಂಘ ಕಟ್ಟುವ ಹಕ್ಕು ಮತ್ತು ಪ್ರತಿಭಟನೆ ಹಕ್ಕುಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುರಡೆ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಪ್ರಮುಖ ರಮೇಶ ಸಾಸಾಬಾಳ ಮಾತನಾಡಿ, ‘ಒಂಬತ್ತು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜುಲೈ 9ರಂದು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗಿದೆ. ಮುಂಬರುವ ಡಿಸೆಂಬರ್‌ನಲ್ಲಿ ಅನಿರ್ದಿಷ್ಟಾವಧಿ ಕಾಲ ಕೇಂದ್ರ ಸಚಿವರ ಮನೆಗಳಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಕಾರರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿಲ ಹಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಎಸ್.ಎಂ.ಪಾಟೀಲ, ಬಸಮ್ಮ ಅಗರ, ಶರಣಮ್ಮ ಹಿರೇಮಠ, ಶಾಂತಾ ತಳವಾರ, ಮಾನಂದಾ ಮಾಶ್ಯಾಳ, ಲಕ್ಷ್ಮಿಂಬಾಯಿ ಕುಂಬಾರ, ಕಲಾವತಿ ತಳವಾರ, ಕೆ.ಪಿ.ಸಜ್ಜನ, ಸುಮಾ ದುಳಬಾ, ಸುರೇಖಾ ದೊಡಮನಿ, ಜಗದೇವಿ ಪಾಸೋಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.