ಸಿಂದಗಿ: ವಿಜಯಪುರ- ಬೆಂಗಳೂರು ನೇರ ಸೂಪರ್ ಫಾಸ್ಟ್ ರೈಲು ಮತ್ತು ವಂದೇ ಭಾರತ್ ರೈಲು ಸೇವೆ ಪ್ರಾರಂಭಿಸುವಂತೆ ಒತ್ತಾಯಿಸಿ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆ ತೋಟಗಾರಿಕೆ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಈ ಭಾಗದ ರೈತರು ಬೆಂಗಳೂರಿಗೆ ಹೋಗುವುದು ಸಾಮಾನ್ಯ. ಅವರಿಗೆ ಬಸ್ ಸಂಚಾರ ತುಂಬಾ ದುಬಾರಿಯಾಗುತ್ತದೆ. ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ ಜಿಲ್ಲೆಯಿಂದ ನಿತ್ಯ ಸಾರ್ವಜನಿಕರು ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಅವರಿಗೆ ಸೂಪರ್ ಫಾಸ್ಟ್ ರೈಲು ತುಂಬಾ ಅಗತ್ಯವಾಗಿದೆ. ಈಗ ವಿಜಯಪುರದಿಂದ ಬೆಂಗಳೂರಿಗೆ ಹೋಗುವ ಗೋಲಗುಂಬಜ್ ರೈಲು 16 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇದು ಪ್ರಯಾಣಿಕರಿಗೆ ತುಂಬಾ ಅನಾನೂಕುಲವಾಗುತ್ತದೆ ಎಂದು ಶಾಸಕರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅದೇ ರೀತಿ ರಾಷ್ಟ್ರದಾದ್ಯಂತ ಆಧುನಿಕ ಸೌಲಭ್ಯವನ್ನೊಳಗೊಂಡ ವಂದೇ ಭಾರತ್ ರೈಲನ್ನು ವಿಜಯಪುರ- ಬೆಂಗಳೂರು ಮಧ್ಯೆ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದು ಅವರು ಕೋರಿಕೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.