ADVERTISEMENT

ಸಿಂದಗಿ | ಮನೆ ತೆರವು: ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:53 IST
Last Updated 15 ಸೆಪ್ಟೆಂಬರ್ 2025, 4:53 IST
ಸಿಂದಗಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಪ್ರತಿಭಟನಕಾರರು ತಲೆ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿದರು
ಸಿಂದಗಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಪ್ರತಿಭಟನಕಾರರು ತಲೆ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿದರು   

ಸಿಂದಗಿ: ಸ.ನಂ 842/2*2 ರಲ್ಲಿನ 84 ಕುಟುಂಬಗಳ ಮನೆಗಳನ್ನು ತೆರುವುಗೊಳಿಸಿದ ಹಿನ್ನೆಲೆಯಲ್ಲಿ ನಿವಾಸಿಗಳು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರಾರಂಭಿಸಿದ ಧರಣಿ ಸತ್ಯಾಗ್ರಹ ಭಾನುವಾರ 9ನೆಯ ದಿನಕ್ಕೆ ಕಾಲಿಟ್ಟಿದೆ. ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಿಚಾರವಾದ) ರಾಜ್ಯ ಘಟಕದ ಸಂಚಾಲಕ ರಾಕೇಶ ಕಾಂಬಳೆ ಹಾಗೂ ಭೀಮೂ ರತ್ನಾಕರ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟಿಸಿದರು.

ಧರಣಿ ಸತ್ಯಾಗ್ರಹ ಒಂಬತ್ತನೆಯ ದಿನದಲ್ಲಿ ಮುಂದುವರೆದರೂ ಸಂಬಂಧಿಸಿದ ಯಾರೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಸುಳಿದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘23 ವರ್ಷಗಳಿಂದ ವಾಸಿಸುತ್ತಿದ್ದ ಜಾಗದಲ್ಲಿ, ಅದೇ ಓಣಿ, ಅದೇ ನಮ್ಮ ಜನ, ಅದೇ ಕಟ್ಟಡ, ಶೆಡ್ಡು ಗಳೇ ನಮಗೆ ಬೇಕು. ಅಲ್ಲಿಂದ ಇಲ್ಲಿ ಹೋಗ್ರಿ, ಇಲ್ಲಿಂದ ಅಲ್ಲಿ ಹೋಗ್ರಿ ಅಂತರಗಂಗಿ ಜಾಗಕ್ಕೆ ಹೋಗಿ ಎಂದರೆ ಹೋಗುವುದಿಲ್ಲ. ಅಲ್ಲಿನ ನಿವೇಶನಗಳು ನಮಗೆ ಬೇಡ. ನಮ್ಮ ಮೂಲ ಜಾಗ ಸಿಗುವ ತನಕ ಇಲ್ಲಿಂದ ಮೇಲೇಳುವುದಿಲ್ಲ. ಈಗಾಗಲೇ ನಮ್ಮ ಬದುಕು ಬೀದಿಗೆ ಬಂದಾಗಿದೆ. ನಮಗೆ ಲಿಖಿತ ಭರವಸೆ ಮಾತ್ರವಲ್ಲದೇ ನಾವು ವಾಸ ಮಾಡುತ್ತಿದ್ದ ಸ್ಥಳದಲ್ಲಿನ ಹಕ್ಕುಪತ್ರ ನೀಡಿದರೆ ಮಾತ್ರ ಸತ್ಯಾಗ್ರಹ ಅಂತ್ಯಗೊಳ್ಳುವುದು’ ಎಂದು ನಿವಾಸಿ ಫಾತಿಮಾ ಆಳಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ, ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಭೀಮರಾಯ ಪೂಜಾರಿ, ಸಿಂದಗಿ ತಾಲ್ಲೂಕು ಘಟಕದ ಅಧ್ಯಕ್ಷ ಬಸೀರ ತಾಂಬೆ, ವಿಶ್ವನಾಥ ಕಣಮೇಶ್ವರ, ಸುನೀಲ ಕೂಚಬಾಳ, ಅಜೀಮ್ ಶೇಖ್, ರವಿ ಕಲಾಲ, ಸುನೀಲ ನಾಗಾವಿ, ಶ್ರೀಕಾಂತ ಸುರಪುರ, ಮಂಜುನಾಥ ಜಮಾದಾರ, ಮಾದೇವ ಕುಂಬಾರ, ಪ್ರದೀಪ ತಳವಾರ, ಸಂಗಮೇಶ ರತ್ನಾಕರ ಹಾಗೂ ಪಾರ್ವತಿ ತಳವಾರ, ಮಾದೇವಿ ಮುರಡಿ, ಜಯಶ್ರೀ ಬಿರಾದಾರ, ರಾಧಾಬಾಯಿ ಹೊಸಮನಿ, ಬಸಮ್ಮ ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.