ADVERTISEMENT

ವಿಜಯಪುರ ಜಿಲ್ಲೆಯಲ್ಲಿ 95 ಜನರಿಗೆ ಡೆಂಗಿ

ಡೆಂಗಿ, ಚಿಕನ್‍ಗುನ್ಯ ನಿಯಂತ್ರಣಕ್ಕೂ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 19:30 IST
Last Updated 26 ಮೇ 2020, 19:30 IST
ವಿಜಯಪುರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ವೈದ್ಯಕೀಯ ಉಪಕರಣವನ್ನು ಪರಿಶೀಲಿಸಿದರು
ವಿಜಯಪುರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ವೈದ್ಯಕೀಯ ಉಪಕರಣವನ್ನು ಪರಿಶೀಲಿಸಿದರು   

ವಿಜಯಪುರ: ಜಿಲ್ಲೆಯಲ್ಲಿ ಈವರೆಗೆ 300 ಜನರ ರಕ್ತ ತಪಾಸಣೆ ಮಾಡಲಾಗಿದ್ದು, 95 ಜನರಿಗೆ ಡೆಂಗಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಜೇಬುನ್ನಿಸಾಬೇಗಂ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಡೆಂಗಿ, ಮಲೇರಿಯಾ ಹಾಗೂ ಚಿಕನ್‍ಗುನ್ಯಾದಿಂದ ಜಿಲ್ಲೆಯಲ್ಲಿ ಈವರೆಗೆ ಯಾರೊಬ್ಬರೂ ಮೃತಪಟ್ಟಿಲ್ಲ ಎಂದರು.

ಬಡ ಕುಟುಂಬಗಳಿಗೆ ಸೊಳ್ಳೆ ಪರದೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಸೂಚನೆ:ಡೆಂಗಿ, ಮಲೇರಿಯಾ ಹಾಗೂ ಚಿಕನ್‍ಗುನ್ಯದಂತಹ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.

ಸಾಂಕ್ರಾಮಿಕ ರೋಗಗಳ ಬಗ್ಗೆ ಮನೆಮನೆಗೆ ತೆರಳಿ ತಿಳಿ ಹೇಳುವುದರ ಜೊತೆಗೆ ಆಶಾ ಕಾರ್ಯಕರ್ತೆಯರಿಂದ ಸರ್ವೇ ಕಾರ್ಯ ಕೈಗೊಳ್ಳಬೇಕು ಎಂದರು.

ಡೆಂಗಿ ಹಾಗೂ ಮಲೇರಿಯಾ ಈ ಹಿಂದೆ ಯಾವ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಗಮನಿಸಬೇಕು ಹಾಗೂ ಕೊಳೆಗೇರಿಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಒಳಚರಂಡಿ ಹಾಗೂ ಕೊಳಚೆ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು. ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಗೋಡೌನ್‌ಗಳಲ್ಲಿ ಸೊಳ್ಳೆಗಳು ಉತ್ಪಾದನೆಯಾಗದಂತೆ ಎಚ್ಚರವಹಿಸಬೇಕು. ಅನುಪಯುಕ್ತ ಹಾಗೂ ಘನತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮಾಡಬೇಕು ಎಂದರು.

ಮಹಾನಗರ ಪಾಲಿಕೆ ಸೊಳ್ಳೆ ನಾಶಕ್ಕೆ ವಾರಕ್ಕೊಮ್ಮೆ ಕೀಟನಾಶಕ ದ್ರಾವಣ ಸಿಂಪಡಿಸಬೇಕು ಹಾಗೂ ಧೂಮಿಕರಣ ಕೈಗೊಳ್ಳಬೇಕು. ಸೊಳ್ಳೆ ರಹಿತ ಓವರ್‌ಹೆಡ್‌ ಹಾಗೂ ಅಂಡರ್‌ಗ್ರೌಂಡ್‌ ಟ್ಯಾಂಕ್‍ಗಳನ್ನು ನಿರ್ಮಿಸಬೇಕು. ನೀರು ಪೂರೈಸುವ ಮೊದಲು ಸೂಕ್ತ ಕ್ಲೋರಿನೇಶನ್ ಮಾಡಬೇಕು. ಜೊತೆಗೆ ನೀರು ಸರಬರಾಜು ಮಾಡುವ ಪೈಪ್‌ಗಳಲ್ಲಿ ಸೋರಿಕೆ ತಡೆಗಟ್ಟಬೇಕು ಎಂದು ಸೂಚಿಸಿದರು.

ಮೀನುಗಾರಿಕೆ ಇಲಾಖೆಯಿಂದ ಲಾರ್ವಾಹಾರಿ ಗಪ್ಪಿ ಮತ್ತು ಗ್ಯಾಂಬ್ಯುಸಿಯಾ ಮೀನುಗಳನ್ನು ಬೆಳೆಸಿ ಜಿಲ್ಲೆಯಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಹಾಗೂ ಆರೋಗ್ಯ ಇಲಾಖೆಗೆ ಅಗತ್ಯಬಿದ್ದಾಗ ಮೀನುಗಳನ್ನು ಸೂಕ್ತ ಸಮಯದಲ್ಲಿ ಉಚಿತವಾಗಿ ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ, ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ಡಬ್ಲ್ಯುಎಚ್‍ಒ ಆರೋಗ್ಯ ಅಧಿಕಾರಿ ಮುಕುಂದ ಗಲಗಲಿ, ಡಾ.ಬಿರಾದಾರ, ಡಾ.ಕಟ್ಟಿ, ಡಿಎಚ್‍ಒ ಮಹೇಂದ್ರ ಕಾಪ್ಸೆ, ಟಿಎಚ್‍ಒ ಕವಿತಾ, ಎನ್.ಆರ್ ಬಾಗವಾನ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.