ADVERTISEMENT

ಸಿದ್ಧೇಶ್ವರ ಶ್ರೀಗಳ ಆರೋಗ್ಯ ಕ್ಷೀಣ: ಆಕ್ಸಿಜನ್‌ ಅಳವಡಿಕೆ

ಮಠಾಧೀಶರು, ಗಣ್ಯರು, ರಾಜಕಾರಣಿಗಳ ಭೇಟಿ; ಆತಂಕದಲ್ಲಿ ಭಕ್ತ ಸಮೂಹ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 15:31 IST
Last Updated 2 ಜನವರಿ 2023, 15:31 IST
ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಲು ಆಶ್ರಮಕ್ಕೆ ಸೋಮವಾರ ಭೇಟಿ ನೀಡಿದ ಬೈಲೂರು ನಿಷ್ಕಲಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯಮಠದ ಡಾ. ಸಿದ್ಧರಾಮ ಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು 
ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಲು ಆಶ್ರಮಕ್ಕೆ ಸೋಮವಾರ ಭೇಟಿ ನೀಡಿದ ಬೈಲೂರು ನಿಷ್ಕಲಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯಮಠದ ಡಾ. ಸಿದ್ಧರಾಮ ಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು    

ವಿಜಯಪುರ: ಅನಾರೋಗ್ಯದಿಂದ ನಿತ್ರಾಣವಾಗಿರುವ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಆರೋಗ್ಯ ಕ್ಷಣ, ಕ್ಷಣಕ್ಕೂ ಕ್ಷೀಣಿಸತೊಡಗಿದ್ದು, ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ.

ಆಸ್ಪತ್ರೆಗೆ ಕರೆದೊಯ್ಯಲು ಶ್ರೀಗಳು ಒಪ್ಪಿಗೆ ನೀಡದಿರುವ ಕಾರಣ ಆಶ್ರಮದಲ್ಲೇ ವೈದ್ಯರ ತಂಡ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ರಾತ್ರಿ 8ರ ಬಳಿಕ ಮತ್ತಷ್ಟು ತಜ್ಞ ವೈದ್ಯರನ್ನು ಆಶ್ರಮಕ್ಕೆ ಕರೆಯಿಸಲಾಗಿದ್ದು, ಕೊನೇ ಪ್ರಯತ್ನ ನಡೆಸಿದ್ದಾರೆ.

‘ಸೋಮವಾರ ಬೆಳಿಗ್ಗೆ ಗಂಜಿ ಸೇವಿಸಿದ್ದ ಶ್ರೀಗಳು ಬಳಿಕ ಏನನ್ನೂ ಸೇವಿಸಿಲ್ಲ. ಅವರ ನಾಡಿಮಿಡಿತ, ರಕ್ತದೊತ್ತಡ ನಿಧಾನವಾಗಿ ಕಡಿಮೆಯಾಗತೊಡಗಿದೆ. ಸದ್ಯ ಆಕ್ಸಿಜನ್‌ನಲ್ಲಿ ಇದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿ ಇದ್ದಾರೆ’ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ. ಮೂಲಿಮನಿ, ಡಾ.ಎಸ್.ಬಿ.ಪಾಟೀಲ, ಡಾ.ಸೋಮಶೇಖರ್ ತಿಳಿಸಿದ್ದಾರೆ.

ADVERTISEMENT

ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಅವರೂ ಕೂಡ ವೈದ್ಯರ ಹೇಳಿಕೆಯನ್ನು ದೃಢೀಕರಿಸಿದರು.

’ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ವರ್ಗಾಯಿಸುವ ಅಗತ್ಯ ಇದೆ. ಆದರೆ, ಅವರು ಎಂದೂ ಆಸ್ಪತ್ರೆಗೆ ಹೋಗಿಲ್ಲ. ಹೀಗಾಗಿ ಆಶ್ರಮದಲ್ಲೇ ಚಿಕಿತ್ಸೆ ಮುಂದುವರಿದಿದೆ. ಅವರು ಆದಷ್ಟು ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಷ್ಟೇ ಸಾಧ್ಯ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಹರಿದು ಬಂದ ಭಕ್ತ ಸಾಗರ:

ಶ್ರೀಗಳನ್ನು ನೋಡಲು ಆಶ್ರಮಕ್ಕೆ ಸೋಮವಾರ ಭಕ್ತರ ಸಾಗರವೇ ಹರಿದುಬಂದಿತ್ತು. ಆಶ್ರಮದ ಆವರಣದಲ್ಲಿ ಮಹಿಳೆಯರು ಭಜನೆ ಮಾಡುವ ಮೂಲಕ ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನೆರೆದ ಭಕ್ತರಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು.

ಭಕ್ತರ ಪ್ರಾರ್ಥನೆ:

ನಗರದ ಅನೇಕ ದೇವಾಲಯಗಳಲ್ಲಿ ಭಕ್ತರು ಶ್ರೀಗಳ ಚೇತರಿಕೆಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ಅನೇಕ ಭಕ್ತರು ದೀಡ್‌ ನಮಸ್ಕಾರ ಹಾಕಿ ಆಶ್ರಮಕ್ಕೆ ಬರುತ್ತಿದ್ದಾರೆ.

ಶ್ರೀಗಳ ಹುಟ್ಟೂರಾದ ಮತ್ತು ಆರಂಭಿಕ ಶಿಕ್ಷಣ ಪಡೆದ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಸರ್ಕಾರಿ ಶಾಲೆಯ ಮಕ್ಕಳು ಶ್ರೀಗಳ ಆರೋಗ್ಯ ಚೇತರಿಕೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಆಶ್ರಮದ ಆವರಣದಲ್ಲಿರುವ ’ಜ್ಞಾನ ಭಂಡಾರ’ದಲ್ಲಿ ಮಾರಾಟಕ್ಕೆ ಇಟ್ಟಿರುವ ಶ್ರೀಗಳ ಫೋಟೊ ಮತ್ತು ಗ್ರಂಥಗಳನ್ನು ಭಕ್ತರು ಖರೀದಿಸಿದರು.

ಆಶ್ರಮಕ್ಕೆ ಭೇಟಿ ನೀಡುತ್ತಿರುವ ಭಕ್ತರಿಗೆ ಹಸಿವು, ಬಾಯಾರಿಕೆ ನೀಗಿಸಲು ನೀರು, ಅನ್ನಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

ಆಶ್ರಮ ಸೇರಿದಂತೆ ಸುತ್ತಮುತ್ತ ಭಕ್ತರ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮಠಾಧೀಶರು, ರಾಜಕಾರಣಿಗಳ ಭೇಟಿ:

ಗದುಗಿನ ತೋಂಟದಾರ್ಯಮಠದ ಡಾ. ಸಿದ್ಧರಾಮ ಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೈಲೂರು ನಿಷ್ಕಲಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಆಶ್ರಮಕ್ಕೆ ಸೋಮವಾರ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕರಾದ ಯಶವಂತ ರಾಯಗೌಡ ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, ಶಿವಾನಂದ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ದೊಡ್ಡನಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿದಂತೆ ಅನೇಕ ಗಣ್ಯರು ಆಶ್ರಮಕ್ಕೆ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು.

ಸಿದ್ದೇಶ್ವರ ಶ್ರೀಗಳು ಬಹುದೊಡ್ಡ ಧಾರ್ಮಿಕ ಸಂತ, ಜಾತ್ಯತೀತ ನಿಲುವುಳ್ಳವರಾಗಿದ್ದಾರೆ. ಆಳವಾದ ಜ್ಞಾನ ಹೊಂದಿದ್ದಾರೆ. ಪ್ರವಚನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು.

– ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.