
ವಿಜಯಪುರ: ‘ದೇವದಾಸಿ ಪದ್ಧತಿ ಸಮಾಜದ ಗಂಭೀರ ಪಿಡುಗಾಗಿ ಅನೇಕ ಮಕ್ಕಳ ಬದುಕನ್ನು ಶೋಷಣೆ ಮತ್ತು ದೌರ್ಜನ್ಯಕ್ಕೆ ತಳ್ಳುತ್ತಿದೆ. ಶಿಕ್ಷಣ ಮತ್ತು ಹಕ್ಕುಗಳ ಅರಿವಿನ ಮೂಲಕ ಮಾತ್ರ ಈ ಮಕ್ಕಳನ್ನು ಸಬಲಗೊಳಿಸಿ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯ’ ಎಂದು ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್.ಸುನಂದಮ್ಮ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಇವರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಿಶೋರಿ ನಾಯಕಿಯರ ಒಕ್ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸ್ವಂತ ದುಡಿಮೆ ಹಾಗೂ ಶಿಕ್ಷಣದಿಂದಲೇ ಸಮಾಜದ ಬದಲಾವಣೆ ಸಾಧ್ಯ. ಸಮಾಜದಲ್ಲಿರುವ ಎಲ್ಲಾ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಿ ಸ್ವತಂತ್ರವಾಗಿ ಜೀವನ ನಡೆಸುವ ಅವಕಾಶ ಎಲ್ಲರಿಗೂ ಇದೆ. ಕುಟುಂಬ ವ್ಯವಸ್ಥೆ ಹೆಣ್ಣು ಮಕ್ಕಳಿಗೆ ಆಧಾರವಾಗಬೇಕಾದರೂ, ಅನೇಕರು ದೌರ್ಜನ್ಯ ಮತ್ತು ಶೋಷಣೆಯನ್ನು ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಆತ್ಮವಿಶ್ವಾಸ ಬೆಳೆಸಿ, ತಮ್ಮ ಹಕ್ಕುಗಳು ಹಾಗೂ ಕಾಯ್ದೆ–ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ’ ಎಂದರು.
ವಿಜಯಪುರ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್. ಹಾಗರಗಿ, ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿದರು.
ಬೆಂಗಳೂರಿನ ಮಕ್ಕಳ ತಜ್ಞ, ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ ಶರ್ಮಾ ಗುಡ್ ಯೋಜನೆಯ ಪ್ರಯಾಣ ಮತ್ತು ಒಕಾಲತ್ತು ಸೂಚಿ ಹಂಚಿಕೊಂಡರು. ಕ್ರೀಡೆಯಲ್ಲಿ ಭಾಗವಹಿಸಿದ ಕಿಶೋರಿ ಮತ್ತು ಕಿಶೋರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ, ವಿವಿಯ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ವಿ.ಸಾಲಿಮಠ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.