ADVERTISEMENT

ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ

ಅಮರನಾಥ ಹಿರೇಮಠ
Published 13 ಡಿಸೆಂಬರ್ 2025, 6:14 IST
Last Updated 13 ಡಿಸೆಂಬರ್ 2025, 6:14 IST
ದೇವರಹಿಪ್ಪರಗಿ ತಾಲ್ಲೂಕು ಇಂಗಳಗಿ ಕ್ರಾಸ್‌ನಲ್ಲಿ ಕಳೆದ ಆರು ತಿಂಗಳುಗಳಿಂದ ನಿಂತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿ
ದೇವರಹಿಪ್ಪರಗಿ ತಾಲ್ಲೂಕು ಇಂಗಳಗಿ ಕ್ರಾಸ್‌ನಲ್ಲಿ ಕಳೆದ ಆರು ತಿಂಗಳುಗಳಿಂದ ನಿಂತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿ   

ದೇವರಹಿಪ್ಪರಗಿ: ಪಟ್ಟಣ ಹಾಗೂ ತಾಲ್ಲೂಕಿನ ವಿದ್ಯಾರ್ಥಿಗಳ ಬಹುದಿನದ ಬೇಡಿಕೆ ಹಾಗೂ ಕನಸಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಳೆದ ಒಂದೂವರೆ ವರ್ಷಗಳ ಹಿಂದೆ ಆರಂಭಗೊಂಡು ನಂತರ ಕುಂಟುತ್ತಾ ಸಾಗಿ, ಈಗ ಆರು ತಿಂಗಳಿಂದ ಕಾಮಗಾರಿ ನಡೆಯದೇ ಬಹುತೇಕ ನಿಂತು ಹೋದಂತಾಗಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, 2021-22ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ₹ 2 ಕೋಟಿ ಅಂದಾಜು ಮೊತ್ತದ ಕಾಲೇಜು ಕಟ್ಟಡ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಪಡೆಯುವುದರ ಮೂಲಕ ಅಂದಿನ ಶಾಸಕ ಸೋಮನಗೌಡ ಪಾಟೀಲ ಸಾಸನೂರ  ಕಾಲೇಜು ಕಟ್ಟಡ ಕನಸಿಗೆ ಕೈಜೋಡಿಸಿದರು. ನಂತರ ಸರ್ಕಾರ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಿ ಆದೇಶಿಸಿತ್ತು. ತದನಂತರ 2024 ಮಾರ್ಚ್‌ 9 ರಂದು ಕ್ಷೇತ್ರದ ನೂತನ ಶಾಸಕ ರಾಜುಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು’ ಎಂದು ತಿಳಿಸಿದರು.

‘2024 ರಿಂದ ಆರಂಭಗೊಂಡ ಕಾಲೇಜು ಕಟ್ಟಡ ಕಾಮಗಾರಿಗೆ ನಂತರ ಪುನಃ ₹ 2 ಕೋಟಿ ಅನುದಾನ ದೊರೆತ ಮಾಹಿತಿಯಿದ್ದು, ಕಳೆದ ಕೆಲವು ತಿಂಗಳಿಂದ ಕಾಮಗಾರಿ ನಡೆಯದೇ ಸಂಪೂರ್ಣವಾಗಿ ನಿಂತು ಹೋಗಿದೆ. ಇದೇ ಕಟ್ಟಡದ ಪಕ್ಕವೇ ಐಟಿಐ ಕಾಲೇಜು ಕಟ್ಟಡ ಸುಸಜ್ಜಿತವಾಗಿ ನಿಮಾರ್ಣಗೊಂಡು ಈಗ ಉದ್ಘಾಟನೆಯ ಹಂತದಲ್ಲಿದೆ. ಆದರೆ, ಸರ್ಕಾರಿ ಕಾಲೇಜು ಕಟ್ಟಡ ಮಾತ್ರ ಅರ್ಧಕ್ಕೆ ನಿಂತು, ಕೇಳುವವರೇ ಇಲ್ಲದ ಅವಶೇಷದಂತಾಗಿದೆ. ಈ ಬಗ್ಗೆ ಕೆಎಎಚ್‌ಬಿ ಅಧಿಕಾರಿಗಳನ್ನು ಕೇಳಬೇಕೆಂದರೆ ಅವರಾರೂ ಕಾಮಗಾರಿ ಕಟ್ಟಡದ ಹತ್ತಿರ ಸುಳಿಯುತ್ತಿಲ್ಲ’ ಎಂದು ಮಾಹಿತಿ ನೀಡಿದರು.

ADVERTISEMENT

‘ತಾಲ್ಲೂಕಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ನಿರ್ಮಾಣದ ಹೊಣೆ ಹೊತ್ತಿರುವ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳಿಗೆ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ನಿರ್ದೇಶನ ನೀಡಿ ಕೂಡಲೇ ಗುಣಮಟ್ಟದ ಕಾಮಗಾರಿಯೊಂದಿಗೆ ಕಟ್ಟಡ ಪೂರ್ಣಗೊಳಿಸಲು ಆದೇಶಿಸಬೇಕು. ಈ ಮೂಲಕ ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು’ ಎಂದು ಪಟ್ಟಣದ ನರೇಂದ್ರ ನಾಡಗೌಡ, ನಜೀರ್ ಕಲಕೇರಿ, ರಮೇಶಬಾಬು ಮೆಟಗಾರ, ಸೈಫನ್ ಮುಲ್ಲಾ, ರಾವುತ ಅಗಸರ ಸಹಿತ ಕಾಲೇಜು ವಿದ್ಯಾರ್ಥಿಗಳ ಆಗ್ರಹವಾಗಿದೆ.

ದೇವರಹಿಪ್ಪರಗಿಯಲ್ಲಿ ಅರ್ಧಕ್ಕೆ ನಿಂತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ  ಒಳಾಂಗಣ ನೋಟ.
ಕಾಲೇಜು ಕಟ್ಟಡ ಕಾಮಗಾರಿ ನಿಂತಿರುವದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ರಾಜುಗೌಡ ಪಾಟೀಲ ಶಾಸಕ ದೇವರಹಿಪ್ಪರಗಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.