ADVERTISEMENT

ನೀರಿಲ್ಲದೇ ನಲುಗಿದ ತೋಟಗಾರಿಕಾ ಕ್ಷೇತ್ರ

ದ್ರಾಕ್ಷಿ, ನಿಂಬೆ ಸಸಿ ಲಭ್ಯ; ಉಳಿದ ಸಸಿಗಳಿಗೆ ಬೇಡಿಕೆ ಹೆಚ್ಚಳ

ಅಮರನಾಥ ಹಿರೇಮಠ
Published 19 ಜುಲೈ 2019, 19:30 IST
Last Updated 19 ಜುಲೈ 2019, 19:30 IST
ದೇವರಹಿಪ್ಪರಗಿ ತೋಟಗಾರಿಕಾ ಕ್ಷೇತ್ರದಲ್ಲಿ ನೀರಿನ ಕೊರತೆಯಿಂದ ಒಣಗಿರುವ ವಿವಿಧ ಬಗೆಯ ಸಸ್ಯಗಳು
ದೇವರಹಿಪ್ಪರಗಿ ತೋಟಗಾರಿಕಾ ಕ್ಷೇತ್ರದಲ್ಲಿ ನೀರಿನ ಕೊರತೆಯಿಂದ ಒಣಗಿರುವ ವಿವಿಧ ಬಗೆಯ ಸಸ್ಯಗಳು   

ದೇವರಹಿಪ್ಪರಗಿ: ನೀರಿಲ್ಲದ ಕಾರಣ ಇಲ್ಲಿಯ ತೋಟಗಾರಿಕಾ ಕ್ಷೇತ್ರ ಅಕ್ಷರಶಃ ಒಣಗಿ ಹೋಗಿದೆ.13 ಎಕರೆ 24 ಗುಂಟೆ ವಿಸ್ತೀರ್ಣದ ತೋಟಗಾರಿಕಾ ಕ್ಷೇತ್ರವು ಸಸಿಗಳ ಬೆಳವಣಿಗೆಗೆ ಸಹಕಾರಿಯಾಗಿತ್ತು. ಆದರೆ, ನೀರಿಲ್ಲದ ಕಾರಣ ಒಣಗಿ ಹೋಗಿದೆ.

1963ರಲ್ಲಿ ಆರಂಭಗೊಂಡ ಕ್ಷೇತ್ರದಲ್ಲಿ ಸುಸಜ್ಜಿತ ಕಟ್ಟಡ, ಮೂವರು ಸಿಬ್ಬಂದಿ, ಸಸಿಗಳ ತಯಾರಿಕೆ ಹಾಗೂ ಬೆಳವಣಿಗೆಗೆ ಅಗತ್ಯವಾದ ಮೂರು ಹಸಿರು ಮನೆಗಳು, ನೆರಳು ಪರದೆಮನೆ, ಎರೆಹುಳು ಮತ್ತು ಜೀವಸಾರ ಘಟಕ, ಬಾವಿ, ವಿಶಾಲವಾದ ಕೃಷಿ ಹೊಂಡ ಇವೆ. ಜತೆಗೆ ಕ್ಷೇತ್ರಕ್ಕೆ ಹೊಂದಿದಂತೆ ಹಳ್ಳವಿದ್ದು, ಹಳ್ಳಕ್ಕೆ ಎರಡು ಬಾಂದಾರ ನಿರ್ಮಿಸಲಾಗಿದೆ. ಇಲ್ಲಿಂದ ನೀರನ್ನು ಬಳಸಿಕೊಂಡು ನಿಂಬೆ, ದಾಳಿಂಬೆ, ಮಾವು, ಬೇವು, ದ್ರಾಕ್ಷಿ ಸಹಿತ ವಿವಿಧ ನಮೂನೆಯ ಹೂ–ಗಿಡಗಳನ್ನು ಬೆಳೆದು ಮಾರಾಟ ಮಾಡಲಾಗುತ್ತಿತ್ತು. ಆದರೆ, ಮಳೆ ಅಭಾವದಿಂದ ಸಸಿಗಳು ಒಣಗುವಂತಾಗಿವೆ.

‘ಹಸಿರುಮನೆ, ನೆರಳು ಪರದೆ ಮನೆ ಸಹಿತ ಎಲ್ಲ ವ್ಯವಸ್ಥೆಗಳು ಹಾಳಾಗುತ್ತಿವೆ. ಈಗ ಇಲ್ಲಿ ಯಾವುದೇ ಬಗೆಯ ಸಸಿಗಳನ್ನು ಕೊಳ್ಳುವುದಿರಲಿ, ನೋಡಲು ಸಿಗದಂತಾಗಿವೆ. ಈ ಬಗ್ಗೆ ನಮ್ಮ ಜಿಲ್ಲೆಯವರೇ ಆದ ತೋಟಗಾರಿಕಾ ಸಚಿವರು ಅಗತ್ಯ ಕ್ರಮ ಕೈಗೊಂಡು ಸುಧಾರಣೆ ಮಾಡಬಹುದಾಗಿತ್ತು. ಆದರೆ, ಅವರು ನಿರ್ಲಕ್ಷಿಸಿದ್ದಾರೆ’ ಎಂದು ರೈತರಾದ ಬಾಬುಗೌಡ ಏಳಕೋಟಿ, ಶಾಂತಪ್ಪ ದೇವೂರ, ಮಹೇಶ ಬುದ್ನಿ ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

‘ಪಾಲಿಹೌಸ್‌ನಲ್ಲಿ ಸದ್ಯ ಯಾವುದೇ ಸಸಿಗಳಿಲ್ಲ. ಮುಂದಿನ ತಿಂಗಳಿನಿಂದ ಬೇಡಿಕೆಗೆ ತಕ್ಕಂತೆ ಟೊಮೆಟೊ, ಬದನೆ, ಮೆಣಸಿನ ಸಸಿಗಳನ್ನು ತಯಾರಿಸಲು ಯೋಜನೆ ರೂಪಿಸಲಾಗಿದೆ. ಈಗ ಒಂದು ಡಾಗರೇಜ್ (ದ್ರಾಕ್ಷಿ) ಸಸಿಗೆ ₹6, ನಿಂಬೆ ಸಸಿಗೆ ₹11 ದರ ನಿಗದಿಪಡಿಸಲಾಗಿದೆ. ರೈತರು ಕೇಳಿದಷ್ಟು ಸಸಿಗಳನ್ನು ನೀಡಲಾಗುತ್ತಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ಮಡಿವಾಳಪ್ಪ ಕಡಕೋಳ ತಿಳಿಸಿದರು.

‘ಈ ಭಾಗದ ರೈತರು ಯಾವುದೇ ಸಸಿಗಳನ್ನು ಖರೀದಿಸಬೇಕು ಎಂದರೆ ಆಲಮಟ್ಟಿ ಅಥವಾ ಬೇರೆ ಕಡೆ ಹೋಗಬೇಕು. ಅಲ್ಲಿ ಸಸಿಗಳ ಬೆಲೆ ಕಡಿಮೆ ಇದ್ದರೂ ಅವುಗಳನ್ನು ಸಾಗಿಸಲು ವಾಹನಗಳಿಗೆ ಕೇಳಿದಷ್ಟು ಬಾಡಿಗೆ ನೀಡಬೇಕು. ಇದರಿಂದ ರೈತರ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಆದ್ದರಿಂದ, ತಾಲ್ಲೂಕು ಕೇಂದ್ರದಲ್ಲೇ ವ್ಯವಸ್ಥೆ ಮಾಡಬೇಕು. ರೈತರಿಗೆ ಅಗತ್ಯವಾದ ಎಲ್ಲ ಸಸಿಗಳು ದೊರೆಯುವಂತೆ ಕ್ರಮ ಕೈಗೊಂಡು, ಈ ಭಾಗದ ಕೃಷಿ ಚಟುವಟಿಕೆಗಳಿಗೆ ನೆರವು ನೀಡಬೇಕು’ ಎಂದು ಪ್ರಗತಿಪರ ರೈತರಾದ ಶಿವಾನಂದ ಯಾಳಗಿ, ನಾಗೇಂದ್ರ ಇಂಡಿ, ಸಿದ್ಧನಗೌಡ ಗೋಡ್ಯಾಳ (ಇಂಗಳಗಿ), ಶಂಕರಗೌಡ ಕೋಟಿಖಾನಿ, ರೇವಣಯ್ಯ ಮಠ (ಹರನಾಳ), ಬಸವರಾಜ ಕಲ್ಲೂರು, ಸಂಗನಗೌಡ ಬಿರಾದಾರ (ಮುಳಸಾವಳಗಿ) ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.