
ವಿಜಯಪುರ: ‘ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡಬೇಕು’ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.
ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜನತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು(ಜೆಡಿಎಸ್) ಎನ್‌ಡಿಎಗೆ ಕೊಡುವ ಶಕ್ತಿಯನ್ನು ಗುರುತಿಸಿ, ಬಳಸಿಕೊಳ್ಳುವ ರಾಜಕೀಯ ಜಾಣ್ಮೆ, ಪ್ರಬುದ್ಧತೆ ಮೋದಿ, ಶಾ ಅವರಿಗಿದೆ. ಎನ್‌ಡಿಎ ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸವೂ ಇದೆ’ ಎಂದರು.
‘ನನಗೆ ಈಗಾಗಲೇ 93 ವರ್ಷ ವಯಸ್ಸಾಗಿದೆ. ನಾನು ಮತ್ತೆ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಇಚ್ಛೆ ಇಲ್ಲ. ಈ ಶರೀರದಿಂದ ಆತ್ಮ ಹೊರ ಹೋಗುವ ಮುನ್ನಾ ರಾಜ್ಯದಲ್ಲಿ ಯೋಗ್ಯ ಆಡಳಿತ ಕೊಡುವ ಸರ್ಕಾರ ಬರಲಿದೆ. ಅದನ್ನು ಮೋದಿ ಮಾಡಲಿದ್ದಾರೆ’ ಎಂದರು.
‘ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸಲು ನ್ಯಾಯಾಧೀಕರಣ ಅವಕಾಶ ಕೊಟ್ಟಿದೆ. ಅದರ ಅನುಷ್ಠಾನಕ್ಕೆ ಹೋರಾಟ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.
‘ಮೈಸೂರು, ಕಿತ್ತೂರು, ಕಲ್ಯಾಣ ಕರ್ನಾಟಕ ಎಂದು ರಾಜ್ಯವನ್ನು ಮೂರು ಭಾಗವಾಗಿ ವಿಂಗಡಿಸುವ ಅಗತ್ಯ ಇಲ್ಲ, ನಾವೆಲ್ಲ ಒಂದೇ ತಾಯಿ ಮಕ್ಕಳು.ಒಟ್ಟಾಗಿ ಇರೋಣ, ಸಮೃದ್ಧ ಕರ್ನಾಟಕ ಕಟ್ಟೋಣ' ಎಂದು ಕರೆ ನೀಡಿದರು.
‘ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಆಡಳಿತ ಕೊಟ್ಟ ರಾಜ್ಯ ಸರ್ಕಾರವನ್ನು ನೋಡಿಲ್ಲ’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯದ ನಗೆ ಬೀರಿದ ದೇವೇಗೌಡರು, ‘ದುಡಿಯುವ ಕೈಗೆ ಉದ್ಯೋಗ ನೀಡುವ ಕಾರ್ಯ ಮಾಡಬೇಕು’ ಎಂದರು.
ತಮ್ಮ ಆತ್ಮ ಚರಿತ್ರೆ ‘ನೇಗಿಲ ಗೆರೆಗಳು’ ಪುಸ್ತಕವನ್ನು ಸಮಾವೇಶದಲ್ಲಿ ಪ್ರದರ್ಶಿಸಿ, ಅದರಲ್ಲಿ ಪ್ರಸ್ತಾಪವಾಗಿರುವ ಹಳೆಯ ರಾಜಕೀಯ ಘಟನೆಗಳನ್ನು ಮೆಲಕು ಹಾಕಿದರು. ಯುವ ಶಾಸಕರು, ರಾಜಕೀಯ ಮುಖಂಡರು ಓದುವಂತೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.