ADVERTISEMENT

ವಿಜಯಪುರ| ಡೋಣಿ ನದಿ ಪುನರುಜ್ಜೀವನಕ್ಕಾಗಿ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 9:34 IST
Last Updated 29 ಜುಲೈ 2022, 9:34 IST
ವಿಜಯಪುರ ತಾಲ್ಲೂಕಿನ ಉಕಮನಾಳದಲ್ಲಿ ಡೋಣಿ ನದಿ ಪುನರುಜ್ಜೀವನಕ್ಕಾಗಿ ರೈತರಿಗೆ ಜಾಗೃತಿ ಮೂಡಿಸಲಾಯಿತು
ವಿಜಯಪುರ ತಾಲ್ಲೂಕಿನ ಉಕಮನಾಳದಲ್ಲಿ ಡೋಣಿ ನದಿ ಪುನರುಜ್ಜೀವನಕ್ಕಾಗಿ ರೈತರಿಗೆ ಜಾಗೃತಿ ಮೂಡಿಸಲಾಯಿತು   

ವಿಜಯಪುರ: ಡೋಣಿ ನದಿ ತೀರದ ವಿಜಯಪುರ ತಾಲ್ಲೂಕಿನ ಉಕಮನಾಳದಿಂದ ಬಸವನಬಾಗೇವಾಡಿ ತಾಲ್ಲೂಕಿನ ಡೋಣೂರ ವರೆಗೆ ಡೋಣಿ ನದಿ ಪುನರುಜ್ಜೀವನಕ್ಕಾಗಿ ರೈತರಿಗೆ ಜಾಗೃತಿ ಮೂಡಿಸುವ ಮೂರನೇ ಹಂತದ ಅಭಿಯಾನ ನಡೆಯಿತು.

ನದಿ ವ್ಯಾಪ್ತಿಯ ಗ್ರಾಮಗಳಲ್ಲಿ ಡೋಣಿ ನದಿ ಹಾಗೂ ಸೇತುವೆಗಳನ್ನು ವೀಕ್ಷಣೆ ಮಾಡಿ ನದಿಯಲ್ಲಿ ವ್ಯಾಪಕವಾಗಿ ಬೆಳೆದಿರುವ ಕಂಟಿ ಹಾಗೂ ಆಪು, ಜೇಕು, ನೀರುಲ್ಲು ಮತ್ತು ತುಂಬಿರುವ ಹೂಳು ಕುರಿತು ರೈತರೊಂದಿಗೆ ಚರ್ಚಿಸಲಾಯಿತು.

ವಿಜಯಪುರ ಜಲ ಬಿರಾದಾರಿ ಜಿಲ್ಲಾ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ಡೋಣಿ ನದಿ ಪುನರುಜ್ಜೀವನಕ್ಕಾಗಿ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ನದಿ ಭಾಗದ ಎಲ್ಲ ಗ್ರಾಮ ಪಂಚಾಯಿತಿಗಳಿಂದ ಠರಾವು ಹೊರಡಿಸಿ ನದಿ ಪುನರುಜ್ಜೀವನ ಮಾಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಎಲ್ಲ ಶಾಸಕರಿಗೆ ಠರಾವು ಹೊರಡಿಸಿದ ಪತ್ರದ ಮನವಿ ಮಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರ, ಸದಸ್ಯರಿಗೆ, ಮುಖಂಡರಿಗೆ, ರೈತರಿಗೆ ತಿಳಿ ಹೇಳಿದರು.

ADVERTISEMENT

ರೈತ ಮುಖಂಡ ಬಾಳು ಜೇವೂರ ಮಾತನಾಡಿ, ಡೋಣಿ ನದಿ ಪ್ರವಾಹ ನಿಯಂತ್ರಣಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಹಣ ಬಳಸಿ ಪುನರುಜ್ಜೀವನಗೊಳಿಸುವ ಕಾರ್ಯ ಆರಂಭ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಈ ಕೆಲಸ ತಾತ್ಕಾಲಿಕವಾಗಿ ತುರ್ತಾಗಿ ಮಾಡುವುದರಿಂದ ಶೇ 50 ರಷ್ಟು ಪ್ರವಾಹ ನಿಯಂತ್ರಣ ಮಾಡಬಹುದು ಎಂದು ಹೇಳಿದರು.

ಡೋಣೂರ, ಯಂಬತ್ನಾಳ, ಉಕ್ಕಲಿ, ಉಕಮನಾಳ ಗ್ರಾಮಗಳಲ್ಲಿ ಸಭೆ ನಡೆಸಲಾಯಿತು.

ಉಕ್ಕಲಿ ಗ್ರಾಮದ ಹಿರಿಯ ಮುಖಂಡರಾದ ಅಣ್ಣಾಸಾಹೇಬಗೌಡ ಪಾಟೀಲ್, ಡೋಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಮ್ಯಾಗೇರಿ, ಮಹಾಂತೇಶ ಕೆರುಟಗಿ ಹಾಗೂ ಹಡಗಲಿ ಗ್ರಾಮದ ರೈತ ಮುಖಂಡ ತಿಪರಾಯ ಹತ್ತರಕಿ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.