ADVERTISEMENT

ಹಲಾಲ್‌ ಬಗ್ಗೆ ಅಪಾರ್ಥ ಬೇಡ: ಗಣಿಹಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 15:25 IST
Last Updated 7 ಏಪ್ರಿಲ್ 2022, 15:25 IST
ಎಂ.ಎಸ್.ಪಾಟೀಲ ಗಣಿಹಾರ
ಎಂ.ಎಸ್.ಪಾಟೀಲ ಗಣಿಹಾರ   

ವಿಜಯಪುರ: ಹಲಾಲ್‌ ಎಂದರೆ ಬಳಕೆಗೆಯೋಗ್ಯ ವಸ್ತು, ಸಿದ್ಧವಸ್ತು ಎಂದೇ ಹೊರತು ದೇವರಿಗೆ ಅರ್ಪಿಸಿರುವುದು ಎಂದಲ್ಲ. ಹಲಾಲ್‌ ಬಗ್ಗೆ ಅಪಾರ್ಥ ಬೇಡ ಎಂದು ಎಂದು ಕೆಪಿಸಿಸಿ ವಕ್ತಾರ ಎಂ.ಎಸ್‌.ಪಾಟೀಲ ಗಣಿಹಾರ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರಿ, ಕೋಳಿಗಳಲ್ಲಿ ಇರುವ ಕೆಟ್ಟ ರಕ್ತ ಅಥವಾ ಸೇವಿಸಲು ಯೋಗ್ಯವಲ್ಲದ ರಕ್ತ ಹೊರಹೋಗಲಿ ಎಂಬ ಕಾರಣಕ್ಕೆ ಹಲಾಲ್‌(ಗಂಟಲ ಬಳಿ ಇರುವ ರಕ್ತನಾಳ ಕತ್ತರಿಸುವುದು) ಮಾಡಲಾಗುತ್ತದೆ ಎಂದು ಹೇಳಿದರು.

ಯೋಗ ಗುರು ಬಾಬಾ ರಾಮದೇವ್‌ ಕೂಡ ತಮ್ಮ ಉತ್ಪನ್ನಗಳಿಗೆ ಹಲಾಲ್‌ ಸರ್ಟಿಫಿಕೇಟ್‌ ಪಡೆದುಕೊಂಡಿದ್ದಾರೆ ಎಂದರು.

ADVERTISEMENT

ಹಲಾಲ್‌, ಹಿಜಾಬ್‌, ಆಜಾನ್‌ನಂತಹ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡುಸಮಾಜದ ಶಾಂತಿ, ಸೌಹಾರ್ದ ಕೆಡಿಸಲು ಬಿಜೆಪಿ, ಸಂಘ ಪರಿವಾರ ತೊಡಗಿದೆ. ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.

ಬಿಜೆಪಿ, ಸಂಘ ಪರಿವಾರದವರು ತಾವು ಮಾತ್ರಭಾರತೀಯರು. ಭಾರತ ತಮಗೆ ಸೇರಿದ್ದು ಎಂಬಂತೆ ಬಿಂಬಿಸುತ್ತಿರುವುದು ಖಂಡನೀಯ. ಭಾರತ ಎಲ್ಲ ಧರ್ಮ, ಜಾತಿ, ಪಕ್ಷದವರಿಗೆ ಸೇರಿದ್ದು, ಮುಸ್ಲಿಮರು ಸಹ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ,ಜೀವ ತೆತ್ತಿದ್ದಾರೆ ಎಂದರು.‌

ಮಸೀದಿಗಳಿಗೆ ನೋಟಿಸ್‌:

ಮಸೀದಿಗಳಲ್ಲಿ ಆಜಾನ್‌ ವೇಳೆ ಧ್ವನಿವರ್ದಕ ಬಳಸುವಾಗ ಕಡಿಮೆ ಡೆಸಿಬಲ್‌ ಧ್ವನಿ ಹೊಮ್ಮುವಂತೆ ಕ್ರಮಕೈಗೊಳ್ಳಬೇಕು ಎಂದು ಪೊಲೀಸರು ನೋಟಿಸ್‌ ನೀಡಿದ್ದಾರೆ. ಈ ಕಾನೂನು ಎಲ್ಲ ಧರ್ಮೀಯರಿಗೂ ಅನ್ವಯವಾಗಬೇಕು. ಮಸೀದಿ, ಚರ್ಚ್‌, ದೇವಸ್ಥಾನಗಳಲ್ಲೂ ಧ್ವನಿವರ್ದಕಗಳಿಗೂ ಅನ್ವಯವಾಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಮಸೀದಿಗಳಲ್ಲೂ ಧ್ವನಿವರ್ದಕಗಳ ಬಳಸುವಾಗ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು, ಯಾರಿಗೂ ತೊಂದರೆಯಾಗದಂತೆ ಬಳಸಬೇಕು ಎಂದು ಮನವಿ ಮಾಡಿದರು.

ಕಟ್ಟಡ ನಿರ್ಮಾಣ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲದೇ,ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಬೆಲೆ ನಿಯಂತ್ರಣಕ್ಕೆಸರ್ಕಾರ ಗಮನಹರಿಸಬೇಕೇ ಹೊರತು, ಜನರ ನಡುವೆ ಭಾವನಾತ್ಮಕ ವಿಷಯಗಳ ಬಗ್ಗೆ ವಿವಾದ ಎಬ್ಬಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹಿಜಾಬ್‌ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗೊಂದಲವಾಗಿಸಿರುವುದು ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಪರಿಣಾಮ ಶೈಕ್ಷಣಿಕ ವ್ಯವಸ್ಥೆ ಹದಗೆಟ್ಟಿದೆ. ಇದನ್ನು ಸರಿಪಡಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಹಿಜಾಬ್‌ ವಿವಾದಕ್ಕೂ ಅಲ್‌ಕೈದಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ.ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಅಲ್‌ಕೈದಾ ಮುಖ್ಯಸ್ಥನ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದರು.

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿ ಅಲ್‌ಕೈದಾ ಮುಖ್ಯಸ್ಥ ಕವನ ಓದಿದ್ದಾನೆ ಎಂಬೆಲ್ಲ ಹೇಳಿಕೆಗಳು ನೈಜವೇ ಎಂಬುದನ್ನು ಪರಿಶೀಲಿಸಬೇಕು. ಅನಗತ್ಯ ಗೊಂದಲಕ್ಕೆ ಎಡೆಮಾಡಿಕೊಡಬಾರದು ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ವಸಂತ ಹೊನಮೋಡೆ, ಅಕ್ರಂ ಮಾಶ್ಯಾಳಕರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.