ADVERTISEMENT

ಮೊಬೈಲ್ ಬೇಡ, ರಿಜಿಸ್ಟರ್ ಬುಕ್ ಕೊಡಿ: ಅಂಗನವಾಡಿ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 15:46 IST
Last Updated 10 ಜುಲೈ 2023, 15:46 IST
ಮೊಬೈಲ್ ಬೇಡ ರಿಜಿಸ್ಟರ್ ಬುಕ್ ಕೊಡಿ ಎಂದು ಸಿಂದಗಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯದ ಎದುರು ಸೋಮವಾರ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತೆಯರು ಮೊಬೈಲ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು
ಮೊಬೈಲ್ ಬೇಡ ರಿಜಿಸ್ಟರ್ ಬುಕ್ ಕೊಡಿ ಎಂದು ಸಿಂದಗಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯದ ಎದುರು ಸೋಮವಾರ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತೆಯರು ಮೊಬೈಲ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು   

ಸಿಂದಗಿ: ಕೆಲಸ ಮಾಡದ ಮೊಬೈಲ್ಫೋನ್‌ ಬೇಡ; ರಿಜಿಸ್ಟರ್ ಬುಕ್ ಕೊಡಿ ಎಂದು ಅಂಗನವಾಡಿ ಕಾರ್ಯಕರ್ತೆಯರು ಘೋಷಣೆ ಕೂಗುತ್ತ ಕೈಯಲ್ಲಿ ಮೊಬೈಲ್ ಪೋನ್‌ ಹಿಡಿದು ಇಲ್ಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯದ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಸಮಾವೇಶಗೊಂಡಿದ್ದರು.

ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ ಅಧ್ಯಕ್ಷೆ ಸರಸ್ವತಿ ಮಠ ಮಾತನಾಡಿ, ‘ನಮಗೆ ಸಾಮಾಜಿಕ ಭದ್ರತೆಗಳಾದ ಇಎಸ್ಐ, ಪಿಎಫ್, ಪಿಂಚಣಿ, ಎಕ್ಸ್ಗ್ರೇಸಿಯಾ ಸೌಲಭ್ಯಗಳನ್ನು ಕೊಡಲೇಬೇಕು, 45 ಮತ್ತು 46ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ ಗಳ ಶಿಫಾರಸ್ಸುಗಳನ್ನು ಜಾರಿ ಮಾಡಲೇಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕೊಡುವ ಕುರಿತಂತೆ ಸುಪ್ರಿಂಕೋರ್ಟ್ ನೀರಿರುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು. ಏಕರೂಪದ ಸೇವಾ ನಿಯಮಗಳನ್ನು ಕೂಡಲೇ ರೂಪಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಾವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಉತ್ತಮ ಗುಣಮಟ್ಟದ ಮೊಬೈಲ್ ಗಳನ್ನು ಕೊಡಬೇಕು. ಹಂತ, ಹಂತವಾಗಿ ಅವುಗಳಿಗೆ ಬದಲಾಗಿ ಟ್ಯಾಬ್ಲೆಟ್ ಗಳನ್ನು ಕೊಡಬೇಕು. ಅವುಗಳಿಗೆ ನೆಟ್ವರ್ಕ್, ಡಾಟಾ, ಪ್ಯಾಕ್ ಗಳನ್ನು ಖಾತರಿ ಮಾಡಬೇಕು. ಆ ಮೊಬೈಲ್‌ಗಳಲ್ಲಿ ಪ್ರಾದೇಶಿಕ ಭಾಷೆಗಳ ಪ್ರೊಗ್ರಾಂ  ಅಳವಡಿಸಬೇಕು. ಹಾಗಾದಾಗ ಮಾತ್ರ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಇಲಾಖಾ ಕೆಲಸ ಮಾಡುವವರನ್ನು ಯಾವುದೇ ಕಾರಣಕ್ಕೂ ಬಲಿಪಶುಗಳನ್ನಾಗಿ ಮಾಡಬಾರದು, ಕಿರುಕುಳ ನೀಡಬಾರದು ಎಂಬ ಬೇಡಿಕೆಗಳನ್ನೊಳಗೊಂಡ 15 ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು’ ಎಂದು ಪ್ರಧಾನಕಾರ್ಯದರ್ಶಿ ಪ್ರತಿಭಾ ಕುರಡೆ ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿದರು.
ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಸವರಾಜ ಜಿಗಳೂರ ಅವರಿಗೆ ಮನವಿ ಸಲ್ಲಿಸಿದರು.

ಎಲ್.ಎಂ.ಕುಂಬಾರ, ಸರೋಜಿನಿ ಪಾಟೀಲ, ಬಸಮ್ಮ ಅಗಸರ, ಸುನಂದಾ ಕಲಕೇರಿ, ಮಾನಂದಾ ಮಾಶಾಳ, ಸುಮಾ ದೂಳಬಾ, ಸುರೇಖಾ ಹೊಸಮನಿ, ಕಲಾವತಿ ವಾಲಿಕಾರ, ಜಗದೇವಿ ಪಾಸೋಡಿ, ಕೆ.ಜಿ.ನಾಗಾವಿ, ಪ್ರೇಮಾ ಕೋರವಾರ, ಶಾಂತಾ ಗೋಲಗೇರಿ, ಸವಿತಾ ಕೊಕಟನೂರ, ಪ್ರಭಾವತಿ ತಳವಾರ, ದುಂಡಮ್ಮ ಕೊರಬು, ಕವಿತಾ ವಸ್ತ್ರದ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ದೇಶದ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯಿಸಿ ಕರಾಳ ದಿನ ಆಚರಿಸಲಾಗುತ್ತಿದೆ ಸರಸ್ವತಿ ಮಠ ಅಧ್ಯಕ್ಷೆ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.