ವಿಜಯಪುರ: ವೈದ್ಯಕೀಯ ವೃತ್ತಿಯನ್ನು ಪ್ರವೇಶಿಸುತ್ತಿರುವ ಯುವ ವೈದ್ಯರು ಸಹಾನುಭೂತಿ ಮತ್ತು ಕರುಣೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ನವದೆಹಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿಯ ಅಧ್ಯಕ್ಷ ಡಾ.ಎಂ.ಕೆ.ರಮೇಶ ಹೇಳಿದರು.
ನಗರದ ಬಿ. ಎಲ್. ಡಿ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 13ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಇನ್ನೂ ಹೆಚ್ಚಾಗಿ ಅಧ್ಯಯನ ನಿರತರಾಗಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಬೇಕು ಎಂದು ಹೇಳಿದರು.
ದೇಶದಲ್ಲಿ ವೈದ್ಯಕೀಯ ಸೇವೆ ಹೊಸ ಮಜಲನ್ನು ತಲುಪಿದ್ದು, ರೋಗಗಳಿಗೆ ಗುಣಮಟ್ಟದ ಸೇವೆ ತಲುಪಿಸಲು ಅತ್ಯಾಧುನಿಕ ತಂತ್ರಜ್ಞಾನ ಸದ್ಬಳಕೆಯಾಗುತ್ತಿದೆ. ಇಂಟರ್‌ನೆಟ್‌ನಿಂದಾಗಿ ರೋಗಿಗಳಿಗೆ ದೂರದಿಂದಲೇ ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಡಿಜಿಟಲ್ ವೇದಿಕೆಗಳು ರೋಗಿಗಳನ್ನು ವೈದ್ಯರು ಸುಲಭವಾಗಿ ತಲುಪಲು ನೆರವಾಗಿವೆ ಎಂದರು.
ಕೃತಕ ಬುದ್ದಮತ್ತೆ (ಎಐ) ಬಳಕೆಯಿಂದಾಗಿ ರೋಗಗಳ ಗುಣಲಕ್ಷಣಗಳನ್ನು ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಲು ನೆರವಾಗಿವೆ. ರೊಬೊಟಿಕ್ ತಂತ್ರಜ್ಞಾನ ಸರಳ, ಸುಲಭ, ಕಡಿಮೆ ವೆಚ್ಚ ಮತ್ತು ಹೆಚ್ಚು ಗಾಯವಿಲ್ಲದೇ ಶಸ್ತ್ರಚಿಕಿತ್ಸೆ ನಡೆಸಲು ವರದಾನವಾಗಿದೆ. ಜಿನೊಮಿಕ್ಸ್ ಮತ್ತು ಪ್ರಿಸೀಶನ್ ಮೆಡಿಸಿನ್ ತಂತ್ರಜ್ಞಾನ, ನ್ಯಾನೊಟೆಕ್ನಾಲಜಿ, ರಿಜನರೇಟಿವ್ ಮೆಡಿಸಿನ್ ಮತ್ತು ಸ್ಟಮ್ ಸೆಲ್ ಥೆರಪಿ, ಹೆಲ್ತ್ ಕೇರ್ ಡಾಟಾ ವಿಶ್ಲೇಷಣೆ, ಮೆಡಿಕಲ್ ಡಿವೈಸಿಸ್ ಮತ್ತು ವಿಯರೇಬಲ್ ಟೆಕ್ನಾಲಜಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ತ್ವರಿತ ಪತ್ತೆ, ಚಿಕಿತ್ಸೆ ಮತ್ತು ರೋಗಗಳಿಂದ ಗುಣಮಖರಾಗಲು ಅನುಕೂಲ ಒದಗಿಸಿವೆ. ಹೀಗಾಗಿ ಯುವ ವೈದ್ಯರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ನೆರವಾಗಬೇಕು ಎಂದರು.
ಯುವ ವೈದ್ಯರು ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಗೀಳಿನಿಂದ ಹೊರ ಬರಬೇಕು. ತಂತ್ರಜ್ಞಾನದ ಸದ್ಭಳಕೆಯಾಗಬೇಕು. ವೈದ್ಯರು ಸಂಶೋಧನೆ ನಿರತರಾಗಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
502 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಬಿ. ಎಲ್. ಡಿ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 13ನೇ ಘಟಿಕೋತ್ಸವದಲ್ಲಿ 11 ಪಿಎಚ್.ಡಿ, 3 ಎಂ.ಸಿಎಚ್(ಯುರಾಲಜಿ), 2 ಡಿ.ಎಂ. (ಕಾರ್ಡಿಯಾಲಜಿ), 239 ವೈದ್ಯಕೀಯ ಸ್ನಾತಕೋತ್ತರ ಪದವಿಗಳು, 3 ಫೆಲೋಶಿಪ್‌ಗಳು, 156 ಎಂಬಿಬಿಎಸ್ ಪದವಿಗಳು, 10 ಸ್ನಾತಕೋತ್ತರ ಅಲೈಡ್ ಹೆಲ್ತ್ ಪದವಿಗಳು, 19 ವಿಜ್ಞಾನ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಪದವಿಗಳು ಮತ್ತು 13 ಬ್ಯಾಚುಲರ್ ಆಫ್ ಫಿಸಿಯೋಥೆರಪಿ, 46 ಅಲೈಡ್ ವಿಜ್ಞಾನ ಪದವಿಗಳು ಸೇರಿದಂತೆ ಒಟ್ಟು 502 ವಿದ್ಯಾರ್ಥಿಗಳಿಗೆ ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ. ಪಾಟೀಲ ಪದವಿ ಪ್ರದಾನ ಮಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ 28 ಚಿನ್ನದ ಪದಕಗಳು ಮತ್ತು 3 ನಗದು ಬಹುಮಾನಗಳನ್ನು ಪ್ರದಾನ ಮಾಡಲಾಯಿತು.
ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ನರ್ಲಾ ಸುರೇಖಾ ಮತ್ತು ಡಾ. ಶಂಕರ್ ನಾರಾಯಣನ್ ಆರ್. ತಲಾ ಎರಡು ಚಿನ್ನದ ಪದಕಗಳನ್ನು ಪಡೆದರು. ಪದವಿ ವೈದ್ಯಕೀಯ ವಿಭಾಗದಲ್ಲಿ ಡಾ. ಯಶ್ ಆರ್ಯ ಐದು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ, ಡಾ. ನಿಶ್ಚಿತಾ ಸಿ. ರಾಜ ಮೂರು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ, ಡಾ. ಸಲೋನಿ ವರ್ಮಾ ಎರಡು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ, ಡಾ. ಶಿರೀಷಾ ಎಂ. ಎಸ್. ಎರಡು ಚಿನ್ನದ ಪದಕಗಳನ್ನು ಪಡೆದರು.
ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾದ ಸಚಿವ ಎಂ. ಬಿ. ಪಾಟೀಲ, ಕುಲಾಧಿಪತಿ ಬಿ.ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಪ್ರಭಾರ ಕುಲಪತಿ ಡಾ. ಅರುಣ್ ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಪರೀಕ್ಷಾ ನಿಯಂತ್ರಕ ಡಾ. ಶಶಿಧರ ದೇವರಮನಿ, ವೈದ್ಯಕೀಯ ವಿಭಾಗದ ಡೀನ್ ಡಾ.ತೇಜಸ್ವಿನಿ ವಲ್ಲಭ, ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಸೈನ್ಸ್ ಮತ್ತು ಟೆಕ್ನಾಲಜಿ ವಿಭಾಗದ ಡೀನ್ ಡಾ. ಎಸ್. ವಿ. ಪಾಟೀಲ ಹಾಗೂ ಕಾನೂನು ವಿಭಾಗದ ಡೀನ್ ಡಾ. ರಘುವೀರ್ ಜಿ. ಕುಲಕರ್ಣಿ, ಡಾ. ಸಚ್ಚಿದಾನಂದ, ಡಾ. ಶ್ರೀನಿವಾಸ ಬಳ್ಳಿ, ಡಾ. ಸ್ನೇಹಾ ಜವಳಕರ, ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಅಶೋಕ ವಾರದ, ಡಾ.ಶ್ರೀಶೈಲ ಗುಡಗಂಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.