ADVERTISEMENT

ಒಣ ದ್ರಾಕ್ಷಿ ದರ ಪಾತಾಳಕ್ಕೆ

ಬೆಂಬೆಲ ಬೆಲೆಗೆ ಬೆಳೆಗಾರರ ಆಗ್ರಹ

ಬಸವರಾಜ ಸಂಪಳ್ಳಿ
Published 19 ಜೂನ್ 2023, 20:28 IST
Last Updated 19 ಜೂನ್ 2023, 20:28 IST
ಒಣ ದ್ರಾಕ್ಷಿ ರಾಶಿ
ಒಣ ದ್ರಾಕ್ಷಿ ರಾಶಿ   

ವಿಜಯಪುರ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ ದರ ತೀವ್ರ ಕುಸಿದಿದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದಿನ ವರ್ಷಗಳಲ್ಲಿ ಕೆ.ಜಿ ಒಣದ್ರಾಕ್ಷಿ ₹180ರಿಂದ ₹300ರ ವರೆಗೆ ಮಾರಾಟವಾಗುತಿತ್ತು. ಈ ವರ್ಷ ಕೆ.ಜಿಗೆ ₹80ರಿಂದ ₹135ರಕ್ಕೆ ದರ ಕುಸಿದಿದೆ.

‘ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದರ ಕುಸಿಯುತ್ತಿದ್ದು, ದಿಕ್ಕು ತೋಚದಂತಾಗಿದೆ. ಕೋಲ್ಡ್‌ ಸ್ಟೋರೇಜ್‌ಗೆ ಬಾಡಿಗೆ ಪಾವತಿಸಲೂ ಆಗುತ್ತಿಲ್ಲ. ಅನ್ಯಮಾರ್ಗವಿಲ್ಲದೇ ಸಿಕ್ಕಷ್ಟೇ ಬೆಲೆಗೆ ಮಾರುತ್ತಿದ್ದೇವೆ’ ಎಂದು ಒಣದ್ರಾಕ್ಷಿ ಬೆಳೆಗಾರರೊಬ್ಬರು ತಿಳಿಸಿದರು.

ಬೆಂಬಲ ಬೆಲೆ ನೀಡಿ:

ADVERTISEMENT

‘ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸಬೇಕು. ಜೊತೆಗೆ ರಫ್ತಿಗೆ ಉತ್ತೇಜಿಸಬೇಕು. ಸರ್ಕಾರವೇ ಬೆಂಬಲ ಬೆಲೆಯಲ್ಲಿ ಒಣ ದ್ರಾಕ್ಷಿ ಖರೀದಿಸಿ ಅಂಗನವಾಡಿ, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಹಾಲು, ಆಹಾರದ ಜೊತೆಗೆ ವಾರಕ್ಕೊಮ್ಮೆ ವಿತರಿಸಬೇಕು’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಕೆ.ಎಚ್.ಮುಂಬಾರಡ್ಡಿ ಒತ್ತಾಯಿಸಿದರು.

ಮಾರಾಟವಾಗದ ಹಸಿ ದ್ರಾಕ್ಷಿ:

‘ಪ್ರತಿ ವರ್ಷ ಶೇ 35ರಷ್ಟು ಹಸಿ ದ್ರಾಕ್ಷಿ (ಟೇಬಲ್‌ ಗ್ರೇಪ್‌) ಮಾರಾಟವಾಗುತ್ತಿತ್ತು. ಉಳಿದಿದ್ದು ಒಣ ದ್ರಾಕ್ಷಿ ಆಗುತ್ತಿತ್ತು. ಆದರೆ, ಈ ವರ್ಷ ಹಸಿ ದ್ರಾಕ್ಷಿ ಹಣ್ಣು ಹೆಚ್ಚು ವ್ಯಾಪಾರವಾಗಿಲ್ಲ. ಅದಕ್ಕೆ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆ ಬೆಳೆಗಾರರು ಒಣ ದ್ರಾಕ್ಷಿಗೆ ಹೆಚ್ಚು ಒತ್ತು ನೀಡಿದ್ದಾರೆ’ ಎಂದು ದ್ರಾಕ್ಷಿ ಬೆಳೆಗಾರ ಅಭಯಕುಮಾರ್‌ ಎಸ್‌. ನಾಂದ್ರೇಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘30 ವರ್ಷಗಳ ಹಿಂದೆ 1 ಕೆಜಿ ಒಣ ದ್ರಾಕ್ಷಿ ₹150 ರಿಂದ ₹170ಕ್ಕೆ ಮಾರಾಟವಾಗುತ್ತಿತ್ತು. ಆಗ 1 ಎಕರೆ ದ್ರಾಕ್ಷಿ ತೋಟದ ನಿರ್ವಹಣೆಗೆ ₹15 ಸಾವಿರದಿಂದ ₹ 20 ಸಾವಿರ ಖರ್ಚಾಗುತ್ತಿತ್ತು. ಸದ್ಯ 1 ಎಕರೆ ನಿರ್ವಹಣೆಗೆ ₹ 2 ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತಿದೆ. ಈಗಿನ ದರದಿಂದ ರೈತರು ಬೆಳೆ ಬೆಳೆಯುವುದನ್ನೇ ಕೈಬಿಡಬೇಕಾದ ಸ್ಥಿತಿಯಿದೆ’ ಎಂದರು.

ರಾಜ್ಯದಲ್ಲಿ 36,371 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆದರೆ, ವಿಜಯಪುರ ಜಿಲ್ಲೆಯಲ್ಲಿ 25,575 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯ ಪಾಲು ಶೇ 70.32ರಷ್ಟು ಇದೆ. ಅಂದಾಜು 6.33 ಲಕ್ಷ ಟನ್‌ ವಾರ್ಷಿಕ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ 90ರಷ್ಟು ಒಣದ್ರಾಕ್ಷಿ ಮಾಡಲಾಗುತ್ತಿದೆ.

ದ್ರಾಕ್ಷಿ ಬೆಳೆಯಲು ವಿಜಯಪುರ ಜಿಲ್ಲೆಯ ಭೂಮಿ ಮತ್ತು ಹವಾಮಾನ ಸೂಕ್ತ. ನೀರಾವರಿ ಸೌಲಭ್ಯ ಹೆಚ್ಚಿದ್ದು ದ್ರಾಕ್ಷಿ ಬೆಳೆಯುವ ಕ್ಷೇತ್ರ ವಿಸ್ತಾರವಾಗುತ್ತಿದೆ. ದ್ರಾಕ್ಷಿ ಉತ್ಪಾದನೆ ಅಧಿಕವಾಗಿದ್ದು ದರ ಕುಸಿತಕ್ಕೆ ಕಾರಣವಾಗಿದೆ.
-ಸಿದ್ದರಾಮ ಬರಗಿಮಠ ಉಪನಿರ್ದೇಶಕ ವಿಜಯಪುರ ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.