
ವಿಜಯಪುರ: ‘ಶರಣರ ವಚನಗಳೇ ಮಾನವ ಹಕ್ಕುಗಳ ಮೂಲ. ಆದರ್ಶ ಸಮಾಜದ ನಿರ್ಮಾಣದಲ್ಲಿ ಅವರು ನೀಡಿದ ಸಂದೇಶಗಳು ನಮ್ಮೆಲ್ಲರ ಜೀವನ ಬದಲಿಸುವ ದಿಕ್ಸೂಚಿಗಳಾಗಿವೆ’ ಎಂದು ವಿಜಯಪುರದ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸನಗೌಡ ಪಾಟೀಲ ಹರನಾಳ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ವಿವಿಧ ದತ್ತಿನಿಧಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಜಾತ್ಯತೀತ ಸಮಾಜ ನಿರ್ಮಾಣ ಮಾಡುವಲ್ಲಿ ನಿರಂತರ ಶ್ರಮಿಸೋಣ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎ.ಕಾಲೇಬಾಗ ಮಾತನಾಡಿ, ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಇಡೀ ಜಿಲ್ಲೆಯಾದ್ಯಂತ ಸಾಮರಸ್ಯ ಬೆಸೆಯುವ ಮಹೋನ್ನತ ಕಾರ್ಯ ಮಾಡುತ್ತಿದ್ದು, ನಾಡು ನುಡಿಯ ಗೌರವ ಹೆಚ್ಚಿಸಿದೆ’ ಎಂದು ತಿಳಿಸಿದರು.
ತಿಕೋಟಾ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ‘ಸಮಾಜದ ಸೂಕ್ಷ್ಮ ಸಂವೇದನೆಗಳನ್ನು ಇಂದು ನಾವೆಲ್ಲರೂ ಅರಿತುಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಚಿಂತಕಿ ಚೈತನ್ಯ ಮುದ್ದೇಬಿಹಾಳ, ಶಶಿಧರ ಸಂಕಣ್ಣನವರ, ಭಾಗೀರಥಿ ಸಿಂಧೆ, ಆಶಾ ಬಿರಾದಾರ, ಶಶಿಕಲಾ ಬಿರಾದಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಕಾನಿಪ ಸಂಘದ ತಾಲ್ಲೂಕ ಘಟಕದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಕೆ.ಎಸ್.ಹಣಮಾಣಿ, ಬಿ.ಎಂ.ಆಜೂರ, ಶ್ರೀಕಾಂತ ನಾಡಗೌಡ, ಮಹಾದೇವಪ್ಪ ಮೋಪಗಾರ, ರಾಜೇಶ್ವರಿ ಮೋಪಗಾರ, ಸುಖದೇವಿ ಅಲಬಾಳಮಠ, ಲತಾ ಗುಂಡಿ, ಗಂಗಮ್ಮ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.